ಶ್ರೀಲಂಕಾದ ಕೊಲಂಬೊದಲ್ಲಿ ಈಚೆಗೆ ನಡೆದ ಸೌತ್ ಏಷಿಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟ ಹಾಗೂ ರಿಲೇಯಲ್ಲಿ ಚಿನ್ನ ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದರು. ನಂತರ ಜಪಾನ್‌ನಲ್ಲಿ ನಡೆದ ಏಷಿಯನ್ ಚಾಂಪಿಯನ್‌ನಲ್ಲಿಯೂ ಕೂಡಾ ರಿಲೇಯಲ್ಲಿ ಕಂಚು ಗೆಲ್ಲುವ ಮೂಲಕ ಫಿನ್‌ಲ್ಯಾಂಡ್‌ನಲ್ಲಿ ನಡೆದ ವರ್ಲ್ಡ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗುವ ಮೂಲಕ ದೇಶದ ಹಿರಿಮೆ ಹೆಚ್ಚಿಸಿದ್ದ ಕೀರ್ತಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕಾಕೆರ ಪ್ರಜ್ವಲ್ ಮಂದಣ್ಣ ಅವರದು.
ಫಿನ್‌ಲ್ಯಾಂಡ್‌ನಲ್ಲಿ ನಡೆದಿದ್ದ ವರ್ಲ್ಡ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದ 400x100 ರಿಲೇಯಲ್ಲಿ ಪ್ರಬಲ ಸ್ಪರ್ಧೆ ನೀಡುವ ಉತ್ಸಾಹದಲ್ಲಿದ್ದ ಕಾಕೆರ ಪ್ರಜ್ವಲ್ ಮಂದಣ್ಣಗೆ ಅದೃಷ್ಟ ಕೈ ಹಿಡಿಯಲಿಲ್ಲ. ತೀವ್ರವಾದ ಸ್ಪರ್ಧೆ ಇದ್ದ ಕಾರಣದಿಂದ ಪ್ರಶಸ್ತಿ ಗೆಲ್ಲುವ ಅವರ ಕನಸಿಗೆ ಹಿನ್ನಡೆ ಆಗಿದೆ. ಆದರೆ ಗುರಿ ಮುಟ್ಟುವ ಛಲ ಮಾತ್ರ ಅವರಲ್ಲಿ ಇನ್ನೂ ಕುಗ್ಗಿಲ್ಲ.
ಕೊಡಗಿನ ಮತ್ತೂರು ಗ್ರಾಮದ ಪ್ರಜ್ವಲ್ ಮಂದಣ್ಣ ಆಳ್ವಾಸ್‌ನಲ್ಲಿ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿ. ಕೊಡಗು ಎಂದಾಕ್ಷಣ ಎಲ್ಲರ ಕಣ್ಮುಂದೆ ಬರುವುದು ಹಾಕಿ ಆಟ. ಇಲ್ಲಿ ಪ್ರತಿಯೊಂದು ಮನೆಗಳಲ್ಲಿ ಒಬ್ಬ ಕ್ರೀಡಾ ಪಟು ಇದ್ದೇ ಇರುತ್ತಾನೆ. ಅದಕ್ಕಾಗಿಯೇ ಕೊಡಗನ್ನು ಕ್ರೀಡಾಪಟುಗಳ ನಾಡು ಎನ್ನುವುದು.
ಕೊಡಗಿನ ಕ್ರೀಡಾಪಟುಗಳ ಪಟ್ಟಿ ದೊಡ್ಡದಿದೆ. ಅಥ್ಲೆಟಿಕ್ಸ್‌ನಲ್ಲಿ ಅಶ್ವಿನಿ ನಾಚಪ್ಪ, ತೀತಮಾಡ ಅರ್ಜುನ್ ದೇವಯ್ಯ, ಪ್ರಮೀಳಾ ಅಯ್ಯಪ್ಪ ಮೊದಲಾದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ರಾಷ್ಟ್ರಕ್ಕೆ ಪ್ರಶಸ್ತಿ, ಕೀರ್ತಿ ತಂದುಕೊಟ್ಟಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಕಾಕೆರ ಪ್ರಜ್ವಲ್ ಮಂದಣ್ಣ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪ್ರಜ್ವಲ್ ತಂದೆ ಕಾಕೆರ ರವಿ ಹಾಗೂ ತಾರಾ ಅವರು ಕೂಡಾ ಕ್ರೀಡಾ ಹಿನ್ನಲೆ ಉಳ್ಳವರು. ಕೆ.ಕೆ. ರವಿ ಅವರು ಹಾಕಿ ಆಟಗಾರರ ಕೂಡಾ ಹೌದು. ತಾಯಿ ಧಾರವಾಡದ ಕ್ರೀಡಾ ವಸತಿ ನಿಲಯದಲ್ಲಿ ಉದ್ಯೋಗಿ ಆಗಿದ್ದಾರೆ.
ಫಿನ್‌ಲ್ಯಾಂಡ್‌ನಲ್ಲಿ ಜುಲೈ 10ರಿಂದ 15ರ ತನಕ ನಡೆದ ಜೂನಿಯರ್ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ರಾಜ್ಯದಿಂದ ಆಯ್ಕೆ ಆಗಿದ್ದರು. ಆದರೆ ಪದಕ ಪಡೆಯುವ ಅದೃಷ್ಟ ಅವರದಾಗಲಿಲ್ಲ. ಪ್ರಜ್ವಲ್ ಮಂದಣ್ಣ ಚಿಕ್ಕ ವಯಸ್ಸಿನಲ್ಲಿ ದೇಶ ಪ್ರತಿನಿಧಿಸಿದ ಹೆಮ್ಮೆ ತಂದಿದೆ. ಪ್ರಜ್ವಲ್ ಮಂದಣ್ಣ ಹೈಸ್ಕೂಲ್‌ನಲ್ಲಿ ಇದ್ದಾಗಲೇ ಚುರುಕಾಗಿ ಓಡುತ್ತಿದ್ದ ಪ್ರತಿಭೆ. ಈತನ ಪ್ರತಿಭೆಗೆ ಹಲವರು ಗುರುತಿಸಿ ಪ್ರೋತ್ಸಾಹ ನೀಡಿದ್ದಾರೆ ಎಂದು ತಂದೆ ಕಾಕೆರ ರವಿ ಹೆಮ್ಮೆಯಿಂದ ಹೇಳಿದರು.
ಪ್ರಜ್ವಲ್ ನಾಲ್ಕನೇ ತರಗತಿ ತನಕ ಸಾಯಿ ಶಂಕರ್‌ನಲ್ಲಿ ಓದಿ, ನಂತರ ಹತ್ತನೇ ತರಗತಿ ತನಕ ಪೊನ್ನಂಪೇಟೆ ಸೇಂಟ್ ಅಂಥೋನಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ತಿಮ್ಮಯ್ಯ ಅವರು ಹುಡುಗನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರು. ಪರಿಣಾಮ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ. ಅಲ್ಲದೇ, ಓದಿನಲ್ಲಿಯೂ ಸದಾ ಮುಂದಿದ್ದಾನೆ ಎಂದರು.
‘ಜಪಾನ್ ಹಾಗೂ ಶ್ರೀಲಂಕಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪದಕ ಬಂದಿದ್ದವು. ಫಿನ್‌ಲ್ಯಾಂಡ್ ನಡೆದ ಕ್ರೀಡಾಕೂಟದಲ್ಲಿ ವಿವಿಧ ದೇಶಗಳ ಅಥ್ಲೀಟ್‌ಗಳ ಪ್ರಬಲವಾದ ಸ್ಪರ್ಧೆ ಇತ್ತು. ಗೆಲುವಿಗಾಗಿ ಕೊನೆ ಕ್ಷಣದವರಿಗೆ ಹೋರಾಟ ಮಾಡಿದೆ. ಆದರೆ ಅದೃಷ್ಟ ಕೈ ಹಿಡಿಯಲಿಲ್ಲ. ಮುಂದೆ ನಡೆಯುವ ಕ್ರೀಡಾಕೂಟದಲ್ಲಿ ಪದಕವನ್ನು ಖಂಡಿತ ಗೆಲ್ಲುವೆ. ಅದಕ್ಕಾಗಿ ಎಲ್ಲ ಶ್ರಮ ವಹಿಸುತ್ತೇನೆ, ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುವಾಗ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿದ್ದೆ. ದೈಹಿಕ ಶಿಕ್ಷಣ ಶಿಕ್ಷಕರ ಮಾತಿನಿಂದ ಪ್ರೇರೇಪಣೆ ಪಡೆದು ಅಥ್ಲೀಟ್ ಆದೆ. ಪದಕ ಬರಲಿಲ್ಲ ಎಂಬ ಬೇಸರ ನನಗೆ ಇಲ್ಲ. ದೇಶವನ್ನು ಪ್ರತಿನಿಧಿಸಿದ್ದು ಖುಷಿ ತಂದಿದೆ’ ಎಂದು ಕ್ರೀಡಾಪಟು ಪ್ರಜ್ವಲ್ ಮಂದಣ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.