ADVERTISEMENT

ಮೇವಿಗಾಗಿ ‘ಹೊರೆಕಾಣಿಕೆ ಅರ್ಪಣೆ’: ಪಜೀರು ಗೋಶಾಲೆ

ಪಜೀರು ಗೋಶಾಲೆಗೆ 100ಕ್ಕೂ ಅಧಿಕ ವಾಹನಗಳಲ್ಲಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 16:18 IST
Last Updated 14 ನವೆಂಬರ್ 2021, 16:18 IST
ಕದ್ರಿ ದೇವಸ್ಥಾನ ಆವರಣದಲ್ಲಿ ಗೋಕಾಣಿಕಾ ಮೆರವಣಿಗೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಮೇಯರ್ ಪ್ರೇಮಾನಂದ ಶೆಟ್ಟಿ ಇದ್ದರು.
ಕದ್ರಿ ದೇವಸ್ಥಾನ ಆವರಣದಲ್ಲಿ ಗೋಕಾಣಿಕಾ ಮೆರವಣಿಗೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಮೇಯರ್ ಪ್ರೇಮಾನಂದ ಶೆಟ್ಟಿ ಇದ್ದರು.   

ಮಂಗಳೂರು: ವಿಶ್ವ ಹಿಂದೂ ಪರಿಷತ್‌ನ ಸಹಯೋಗದ ಸೇವಾ ಸಂಸ್ಥೆಯಾದ ಗೋ ವನಿತಾಶ್ರಯ ಟ್ರಸ್ಟ್‌ ವತಿಯಿಂದ ನಿರ್ವಹಿಸುವ ಪಜೀರು ಗೋಶಾಲೆಯಲ್ಲಿ ‘ಸಾರ್ವಜನಿಕ ಗೋಪೂಜೆ’ ಪ್ರಯುಕ್ತ ಗೋವಿನ ಮೇವಿಗಾಗಿ ‘ಹೊರೆಕಾಣಿಕೆ ಅರ್ಪಣೆ’ ಕಾರ್ಯಕ್ರಮ ನಗರದಲ್ಲಿ ಭಾನುವಾರ ನಡೆಯಿತು.

ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದಿದ್ದ ಹೊರೆಕಾಣಿಕೆಯ ಮೆರವಣಿಗೆ ಮಂಗಳೂರಿನ ಕದ್ರಿ ದೇವಸ್ಥಾನದಿಂದ ಪಜೀರಿನ ಗೋಶಾಲೆವರೆಗೆ ನಡೆಯಿತು. ಹುಲ್ಲು, ಹಿಂಡಿ, ಮೇವು ಹೊತ್ತ 100ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಸಾಗಿದವು.

ಕದ್ರಿ ದೇವಸ್ಥಾನ ಆವರಣದಲ್ಲಿ ಗೋಕಾಣಿಕಾ ಮೆರವಣಿಗೆಗೆ ಚಾಲನೆ ನೀಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ‘ಗೋವು ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವಿನ ರಕ್ಷಣೆಗೆ ಎಲ್ಲರೂ ಜತೆಯಾಗಬೇಕು’ ಎಂದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ‘ದೇಶದ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಕೃಷಿ ಮತ್ತು ಆರೋಗ್ಯದ ವಿಚಾರದಲ್ಲಿ ಗೋವು ಪ್ರಮುಖ ಸ್ಥಾನ ಪಡೆದಿದೆ. ದೇಶದಲ್ಲಿ ಸ್ವಾತಂತ್ರ್ಯ ದೊರೆತಾಗ 86 ಕೋಟಿ ಇದ್ದ ಗೋವುಗಳ ಸಂಖ್ಯೆ ಈಗ 21 ಕೋಟಿಗೆ ಇಳಿದಿದೆ. ಹಿಂದಿನ ಸರ್ಕಾರಗಳು ಗೋವಿಗೆ ಮಹತ್ವ ನೀಡದ ಕಾರಣ ವಿಶ್ವ ಹಿಂದೂ ಪರಿಷತ್ ಅವುಗಳ ಸಂರಕ್ಷಣೆಗೆ ಮುಂದಾಯಿತು. ಅದರ ಭಾಗವಾಗಿ ಪಜೀರಿನಲ್ಲಿ ಗೋಶಾಲೆ ತೆರೆಯಲಾಗಿದೆ’ ಎಂದರು.

ಕದ್ರಿ ಮಂಜುನಾಥ ದೇವಸ್ಥಾನ ತಂತ್ರಿ ವಿಠಲದಾಸ ತಂತ್ರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಆರ್‌ಎಸ್‌ಎಸ್ ಮಂಗಳೂರು ಮಹಾನಗರ ಸಹ ಸಂಘಚಾಲಕ ಸುನೀಲ್ ಆಚಾರ್, ಪಾಲಿಕೆ ಸದಸ್ಯರಾದ ಮನೋಹರ ಶೆಟ್ಟಿ, ಶೈಲೇಶ್, ಕಿರಣ್ ಕುಮಾರ್ ಕೋಡಿಕಲ್, ಗಣೇಶ ಕುಲಾಲ್, ಕದ್ರಿ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಚ್.ಕೆ. ಪುರುಷೋತ್ತಮ, ನಿವೇದಿತಾ ಶೆಟ್ಟಿ, ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಪ್ರಮುಖರಾದ ಡಾ. ಅನಂತಲಕ್ಷ್ಮಿ, ಸಿ.ಎ. ಶಾಂತಾರಾಮ ಶೆಟ್ಟಿ, ದಿನೇಶ್ ದೇವಾಡಿಗ, ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ ಮನೋಹರ ಸುವರ್ಣ, ಟ್ರಸ್ಟಿಗಳಾದ ಗೋಪಾಲ ಕುತ್ತಾರ್, ಶಿವಾನಂದ ಮೆಂಡನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.