ADVERTISEMENT

ಮಂಗಳೂರು: ಮುದ ನೀಡಿದ ‘ಕುಂಭ ಕಲಾವಳಿ’ ವೈಭವ

ಕರ್ನಾಟಕದಲ್ಲಿ ಕುಂಬಾರಿಕೆ ಉಳಿಸಲು ಸರ್ಕಾರದಿಂದ ಪ್ರಯತ್ನ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:58 IST
Last Updated 5 ಜನವರಿ 2026, 6:58 IST
<div class="paragraphs"><p>ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು</p></div>

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು

   

ಮಂಗಳೂರು: ಕನ್ನಡ, ತುಳು ಜಾನಪದ ಹಾಡುಗಳ ರಂಜನೆ, ಕುಂಬಾರಿಕೆ ಮತ್ತಿತರ ಕುಲಕಸುಬುಗಳ ಪ್ರದರ್ಶನ, ಗಾನ–ನೃತ್ಯ, ಕಿರು ಪ್ರಹಸನ ಮತ್ತು ರೂಪಕಗಳ ಆಮೋದ...

ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದಾಸ್ ಚಾರಿಟಬಲ್ ಟ್ರಸ್ಟ್‌ ಸಜಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕುಲಾಲ ಕಲಾ ಸೇವಾಂಜಲಿ ‘ಕುಂಭ ಕಲಾವಳಿ’ಯಲ್ಲಿ ಬೆಳಿಗ್ಗೆಯಿಂದ ರಾತ್ರಿಯ ವರೆಗೂ ಕಲಾ ಸಾಂಸ್ಕೃತಿಕ ವೈಭವ ಮುದ ನೀಡಿತು. 

ADVERTISEMENT

ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದ ಅನೇಕ ರೂಪಕ ಮತ್ತು ನೃತ್ಯಕಾರ್ಯಕ್ರಮಗಳಲ್ಲಿ ಮಣ್ಣಿನ ಮಡಕೆಗಳು ಶೋಭಿಸಿದವು. ಮಡಕೆಗಳನ್ನು ತಯಾರಿಸುವ ಮತ್ತು ಹೊತ್ತುಕೊಂಡು ಹೋಗುವ ದೃಶ್ಯಗಳು ಮೇಳೈಸಿದವು. 

ಕಾರ್ಯಕ್ರಮಕ್ಕೆ ಸಂಜೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿ ನಿತ್ಯ ಬಳಕೆಯ ಸಾಮಗ್ರಿಗಳನ್ನು ತಯಾರಿಸಿಕೊಡುತ್ತಿದ್ದವರು ಕುಂಬಾರರು. ಹೊಸತನದಿಂದಾಗಿ ಕುಂಬಾರಿಕೆ ಕಲೆ ನಶಿಸಿ ಹೋಗುತ್ತಿದೆ. ಅದನ್ನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಲಾಲೂ ಪ್ರಸಾದ್ ಯಾದವ್ ಅವರು ರೈಲಿನಲ್ಲಿ ಚಹಾ ಕೊಡಲು ಮಣ್ಣಿನ ಲೋಟ ಬಳಸುವ ಯೋಜನೆ ಜಾರಿಗೆ ತಂದಿದ್ದರು. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ರಾಜ್ಯದಲ್ಲಿ ಕುಲಕಸುಬು ಮಾಡುವವರಿಗೆ ಬೆಂಬಲ ನೀಡಲು ಸರ್ಕಾರ ಮುಂದಾಗಲಿದೆ. ಮುಂದಿನ ಬಜೆಟ್‌ನಲ್ಲಿ ಆದಷ್ಟು ನೆರವು ನೀಡಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. 

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ‘ಕುಲಾಲ–ಕುಂಬಾರರು ಮಣ್ಣಿನ ಅಸ್ಮಿತೆ ಗೊತ್ತಿರುವವರು. ಮಣ್ಣಿನ ಶಕ್ತಿಯನ್ನು ತಿಳಿದವರು. ತುಳುನಾಡ ಮಣ್ಣು ಸಾಧ್ಯತೆಗಳ ಆಗರ ಎಂದು ತಿಳಿದುಕೊಂಡು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಬೇಕು’ ಎಂದರು.

ಯುವಕರು ಮಾದಕ ಪದಾರ್ಥಗಳ ಮಾಫಿಯಾಗೆ ಒಳಗಾಗದೆ ದೇಶಪ್ರೇಮ ಸಮಾಜ ಪ್ರೇಮದ ಸದ್ಗುಣ ಶೀಲಗಳನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಯುವವೇದಿಕೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಹೇಳಿದರು.

ಮುಳಿಯ ವೈಷ್ಣವಿದೇವಿ ಕ್ಷೇತ್ರದ ಶಿವಾನಂದ ಸರಸ್ವತಿ ಸ್ವಾಮೀಜಿ ‘ಅಧ್ಯಾತ್ಮದ ಸ್ಪರ್ಶ ಇಲ್ಲದ್ದರಿಂದ ಈಗ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಮನೆಯಲ್ಲೇ ಸುಸಂಸ್ಕೃತಿಯನ್ನು ಕಲಿಸಬೇಕು’ ಎಂದು ಸಲಹೆ ನೀಡಿದರು.  

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ‘ಪರಿವರ್ತನೆಯಾಗುತ್ತಿರುವ ಸಮಾಜದಲ್ಲಿ ಮೂಲ ಕಸುಬನ್ನು ಅರ್ಥೈಸಿಕೊಂಡು ಆಚಾರ ವಿಚಾರ ತಿಳಿದುಕೊಳ್ಳಬೇಕು, ಅದಕ್ಕೆ ಹೊಸ ರೂಪ ಕೊಟ್ಟು ಉಳಿಸಬೇಕು. ವಿದ್ಯೆಗೆ ವಿಶೇಷ ಆದ್ಯತೆ ಕೊಟ್ಟು ಆರ್ಥಿಕವಾಗಿಯೂ ಬಲಾಢ್ಯರಾಗಬೇಕು‘ ಎಂದು ಸಲಹೆ ನೀಡಿದರು. ನಡುಬೆಟ್ಟು ದೇವಸ್ಥಾನದ ಧರ್ಮದರ್ಶಿ ರವಿ ನಡುಬೆಟ್ಟು, ಶಾಸಕ ವೇದವ್ಯಾಸ ಕಾಮತ್‌, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಆಡಳಿತ ಸಮಿತಿಯ ಕೋಶಾಧಿಕಾರಿ ಆರ್‌ ಪದ್ಮರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಕುಲಾಲ ಕುಂಬಾರರ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಅಧ್ಯಕ್ಷ ಅನಿಲ್ ದಾಸ್, ಸುಧಾಕರ್ ಸಾಲಿಯಾನ್‌, ಕಾರ್ಯದರ್ಶಿ ಜಯೇಶ್ ಗೋವಿಂದ್‌, ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ ರವೀಂದ್ರ, ಕರಾವಳಿ ಘಟಕದ ಸತೀಶ್‌ ನಡೂರು, ಸುಲೋಚನಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.