ADVERTISEMENT

ಕಡೂರು | ‘ಸರ್ಕಾರಿ ನೌಕರರ ಏಳಿಗೆ: ರಾಜ್ಯ ಸರ್ಕಾರ ಬದ್ಧ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:04 IST
Last Updated 15 ಡಿಸೆಂಬರ್ 2025, 5:04 IST
ಕಡೂರು ತಾಲ್ಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ಮಕ್ಕಳ ಪರವಾಗಿ ಪೋಷಕರು ಪುರಸ್ಕಾರ ಸ್ವೀಕರಿಸಿದರು. ಶಾಸಕ ಕೆ.ಎಸ್‌.ಆನಂದ್‌ ಭಾಗವಹಿಸಿದ್ದರು
ಕಡೂರು ತಾಲ್ಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ಮಕ್ಕಳ ಪರವಾಗಿ ಪೋಷಕರು ಪುರಸ್ಕಾರ ಸ್ವೀಕರಿಸಿದರು. ಶಾಸಕ ಕೆ.ಎಸ್‌.ಆನಂದ್‌ ಭಾಗವಹಿಸಿದ್ದರು   

ಕಡೂರು: ಸರ್ಕಾರಿ ನೌಕರರ ಏಳಿಗೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ತಾಲ್ಲೂಕಿನ ಮಲ್ಲೇಶ್ವರದ ಸ್ವರ್ಣಾಂಬ ದೇವಾಲಯದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆಯೂ ನೌಕರರ ನಿರೀಕ್ಷೆಗೂ ಮೀರಿ ತ್ವರಿತವಾಗಿ 7ನೇ ವೇತನ ಆಯೋಗದ ಶಿಫಾರಸನ್ನು ಜಾರಿ ಮಾಡಿದೆ. ಅನುಷ್ಠಾನಕ್ಕಾಗಿ ಎಷ್ಟೇ ಕಷ್ಟವಿದ್ದರೂ ₹ 21ಸಾವಿರ ಕೋಟಿ ಮಂಜೂರು ಮಾಡಿತು. ಅಲ್ಲದೆ, ಸಂಕಷ್ಟದಲ್ಲಿದ್ದ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿದೆ. ನೌಕರರ ಸಂಘವು ಎಲ್ಲರಿಗೂ ಸಮಾನ ನ್ಯಾಯ ಒದಗಿಸಲು ಸ್ಫೂರ್ತಿದಾಯಕವಾಗಿ ಶ್ರಮಿಸಬೇಕು ಎಂದರು.

ADVERTISEMENT

ಉಪನ್ಯಾಸ ನೀಡಿದ ಅಜ್ಜಂಪುರ ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎನ್‌.ಈ.ಶಿವಕುಮಾರ್‌, ತ್ಯಾಗ, ಛಲ ಮತ್ತು ಪ್ರೇರಣೆಗಳು ಸಾಧನೆಗೆ ದಾರಿಯಾಗಿದ್ದು, ಪೋಷಕರೇ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಸಾಧನೆ ಮತ್ತು ಪ್ರತಿಭೆಯನ್ನು ಗುರುತಿಸಿದರೆ ಮಾತ್ರ ಬೆಳಕಿಗೆ ಬರುತ್ತವೆ ಎಂದರು.

ಕಡೂರು ಬಿಇಒ ಎಂ.ಎಚ್‌.ತಿಮ್ಮಯ್ಯ ಮಾತನಾಡಿ, ಸರ್ಕಾರಿ ನೌಕರರು ತಲ್ಲಣಗಳ ನಡುವೆ ಕೆಲಸ ನಿರ್ವಹಿಸುವಂತಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ನಮ್ಮ ವೃತ್ತಿಯನ್ನು ಇಷ್ಟಪಟ್ಟು, ಪ್ರೀತಿಸಿ ನಿರ್ವಹಿಸಿದರೆ ನಮಗೆ ಶ್ರಮವೂ ಆಗದು, ನಮ್ಮ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮೌಲ್ಯಗಳನ್ನು ಬೆಳೆಸುವ ಮೂಲಕ ಪೋಷಕರು ಅವರಿಗೆ ಕುಟುಂಬದ ಎಲ್ಲ ವಿಷಯಗಳ ಅರಿವು ಇರುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಮಂಜುನಾಥ್‌, ಸರ್ಕಾರಿ ನೌಕರರ ಸಂಘವು ನೌಕರರ ಹಿತ ಕಾಯುವಲ್ಲಿ ಬದ್ಧವಾಗಿದ್ದು ಸಮಾಜಮುಖಿಯಾಗಿಯೂ ಕೆಲಸ ನಿರ್ವಹಿಸುತ್ತಿದೆ. ಕಡೂರಿನಲ್ಲಿರುವ ಸರ್ಕಾರಿ ನೌಕರರ ಸಂಘದ ಕಟ್ಟಡವು ಸೋರುವಂತಾಗಿದ್ದು, ರಕ್ಷಣೆಗಾಗಿ ಮೇಲ್ಭಾಗದಲ್ಲಿ ಶೀಟ್‌ ಅಳವಡಿಸಲು ಶಾಸಕರು ಕನಿಷ್ಠ ₹ 10 ಲಕ್ಷ ಅನುದಾನ ಮಂಜೂರು ಮಾಡಿಕೊಡಬೇಕು. ಗುರುಭವನಕ್ಕಾಗಿ ₹ 20ಲಕ್ಷ ಅನುದಾನ ಮಂಜೂರು ಮಾಡಿಕೊಟ್ಟಿದ್ದು, ಇನ್ನೂ ₹ 2ಕೋಟಿ ಅನುದಾನ ಕೊಡಿಸುವ ಭರವಸೆಯನ್ನು ಬೇಗ ನೆರವೇರಿಸಬೇಕು ಎಂದು ಮನವಿ ಮಾಡಿದರು.

2024-25ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಶೇ 90 ಹಾಗೂ ಅಧಿಕ ಅಂಕ ಗಳಿಸಿದ್ದ 80ಕ್ಕೂ ಹೆಚ್ಚು ಸರ್ಕಾರಿ ನೌಕರರ ಮಕ್ಕಳ ಪರವಾಗಿ ಪೋಷಕರು ಪುರಸ್ಕಾರ ಸ್ವೀಕರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸರ್ಕಾರಿ ಶಾಲೆಗಳ ಮಕ್ಕಳಾದ ಪೂರ್ವಿಕಾ, ವರ್ಷಾ, ಉಮಾ, ಧನ್ಯಶ್ರೀ ಮತ್ತು ಕೀರ್ತಿಶಂಕರ್‌ ಅವರಿಗೆ ತಲಾ ₹ 5 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೀರೂರು ಬಿಇಒ ಬುರ್ಹನುದ್ದಿನ್‌ ಚೋಪ್‌ದಾರ್‌, ಮಲ್ಲೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ರಾಜ್ಯ ಪರಿಷತ್‌ ಸದಸ್ಯ ಸುರೇಶ್‌, ಸಂಘದ ನಿರ್ದೇಶಕ, ಸದಸ್ಯರಾದ ರುದ್ರೇಶ್‌, ರಾಜಶೇಖರ್‌, ಅಶೋಕ್‌, ಶಶಿಕಲಾ, ರಾಜು.ಎಸ್‌.ವಡೆಯರ್‌, ಬಿ.ಜೆ.ಜಗದೀಶ್‌, ಕೆ.ಆರ್‌.ಸುರೇಶ್‌, ಎನ್‌.ಎಸ್‌.ದೇವರಾಜ್‌, ಕವನಾ, ಅರಣ್ಯಾಧಿಕಾರಿ ಹರೀಶ್‌, ಬಿಸಿಎಂ ಅಧಿಕಾರಿ ದೇವರಾಜ್‌, ಶಿಕ್ಷಕರ ಸಂಘದ ಹರೀಶ್‌, ಬಸಪ್ಪ, ಮುರಳೀಧರ, ಪ್ರಶಾಂತ್‌, ಉಪನ್ಯಾಸಕರ ಸಂಘದ ಜ್ಞಾನೇಶ್‌, ಸದಸ್ಯರು, ಪೋಷಕರು, ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.