ADVERTISEMENT

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ ಚಿಕಿತ್ಸೆಗೆ ₹ 9 ಲಕ್ಷ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 4:20 IST
Last Updated 22 ಜುಲೈ 2024, 4:20 IST
   

ಮಂಗಳೂರು: ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ, ಸುಳ್ಯ ತಾಲ್ಲೂಕಿನ ನಾವೂರು ಗ್ರಾಮದ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರ ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರ ಮತ್ತೆ ₹ 9 ಲಕ್ಷ ಅನುದಾನ ಬಿಡುಗಡೆ ಮಾಡಿದೆ.

ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗಿರುವ ಚಾಂದಿನಿ ಅವರ ಚಿಕಿತ್ಸೆ ₹ 34 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿತ್ತು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ₹ 4 ಲಕ್ಷ ಬಿಡುಗಡೆಯಾಗಿತ್ತು. ಉಳಿಕೆ ಮೊತ್ತ ಬಿಡುಗಡೆ ಆಗದ ಕಾರಣ ಚಿಕಿತ್ಸೆ ಮುಂದುವರಿಸಲು ಆಸ್ಪತ್ರೆಯವರು ನಿರಾಕರಿಸಿದ್ದರು. ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಇದ್ದರೆ  ದಯಾಮರಣವನ್ನಾದರೂ ನೀಡಿ’ ಎಂದು ಕೋರಿ ಚಾಂದಿನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಸರ್ಕಾರ ಉನ್ನತ ಅಧಿಕಾರಿಗಳಿಗೆ  ಈಚೆಗೆ ಇ– ಮೇಲ್‌ ಕಳುಹಿಸಿದ್ದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರ ಸಚಿವಾಲಯವು, ‘ಪರಿಶಿಷ್ಟ ಪಂಗಡಕ್ಕೆ ಸೇರಿದ ಚಾಂದಿನಿ ಅವರ ಚಿಕಿತ್ಸೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಜನರಿಗೆ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸೆ ಸೇವೆ ಒದಗಿಸಲು ನಿಗದಿಪಡಿಸಿದ ಅನುದಾನದಿಂದ ಆರ್ಥಿಕ ಸಹಾಯ ಒದಗಿಸಬೇಕು’ ಎಂದು ಸೂಚಿಸಿತ್ತು. ಬಳಿಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ₹ 9 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಚಾಂದಿನಿ ಅವರ ಆಪ್ತ ಮೂಲಗಳು ತಿಳಿಸಿವೆ. 

ADVERTISEMENT

ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಚಾಂದಿನಿ ಎದುರಿಸುತ್ತಿರುವ ಸಮಸ್ಯೆ ಕುರಿತು ‘ಪ್ರಜಾವಾಣಿ’ ಜುಲೈ 9ರ ಸಂಚಿಕೆಯಲ್ಲಿ ‘ನೆರವಾಗಿ ಇಲ್ಲವೇ ದಯಾಮರಣ ನೀಡಿ’ ಎಂಬ  ವರದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.