ಉಜಿರೆ: 2023ರ ಸೆ.6ರಂದು ಸುರಿದ ಭಾರಿ ಮಳೆ, ಬಿರುಗಾಳಿಗೆ ಉಜಿರೆ ಹಳೆಪೇಟೆಯ ಹಳೆಯ ಸರ್ಕಾರಿ ಶಾಲೆಯ ಚಾವಣಿಯ ಹೆಂಚುಗಳು ಹಾರಿ ಹೋದವು. ರೀಪು, ಪಕ್ಕಾಸುಗಳೂ ಮುರಿದು ಬಿದ್ದವು. ಶಾಲೆಯ ಗೋಡೆಯೂ ಕುಸಿಯುವ ಸ್ಥಿತಿಯಲ್ಲಿತ್ತು. ಮಕ್ಕಳೆಲ್ಲ ಹೊರಗೆ ಓಡಿ ಹೋದರು. ಈ ಬಗ್ಗೆ ಮರುದಿನದ ಪತ್ರಿಕೆಗಳಲ್ಲಿ ವರದಿಯೂ ಪ್ರಕಟವಾಯಿತು...
ಇದನ್ನು ಗಮನಿಸಿದ ಉಜಿರೆಯ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್‌ಕಮಾರ್, ಉದ್ಯಮಿ ರಾಜೇಶ್ ಪೈ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ, ಉಜಿರೆ ಗ್ರಾಮ ಪಂಚಾಯಿತಿ, ಬೆಂಗಳೂರಿನ ಕ್ಯಾನ್‌ಫಿನ್ ಹೋಮ್, ಇಂದಿರಾನಗರ ರೋಟರಿ ಕ್ಲಬ್, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್‌ಡಿಎಂ ಕಾಲೇಜಿನ ಕ್ರೀಡಾಸಂಘ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಪರಿಶ್ರಮ, ಶ್ರಮದಾನದಿಂದ ಈ ಶಾಲೆ ನವೀಕರಣಗೊಂಡಿದೆ. 60 ದಿನಗಳಲ್ಲಿ, ಸುಮಾರು ₹ 30 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡಿರುವ ಜ್ಞಾನ ದೇಗುಲ ಮೇ 23ರಂದು ನಡೆಯಲಿರುವ ಯಶೋನಮನ ಕಾರ್ಯಕ್ರಮದಡಿ ಹಸ್ತಾಂತರಗೊಳ್ಳಲಿದೆ.
ಶಾಲೆಗೆ 40 ಹೊಸ ಕಿಟಕಿ, 15 ಹೊಸ ಬಾಗಿಲು ಅಳವಡಿಸಲಾಗಿದೆ. ನೆಲಕ್ಕೆ ಟೈಲ್ಸ್ ಹಾಕಲಾಗಿದೆ. 500 ವಿದ್ಯಾರ್ಥಿಗಳು, 1,350 ಸಾರ್ವಜನಿಕರು ಶ್ರಮದಾನ ಮಾಡಿದ್ದಾರೆ. 60 ಮೇಸ್ತ್ರಿಗಳು, 150 ಸಹಾಯಕರು ಒಂದೇ ದಿನದಲ್ಲಿ ಸಾರಣೆ (ಪ್ಲಾಸ್ಟರಿಂಗ್) ಮಾಡಿದ್ದಾರೆ. ಗೋಡೆಗಳಲ್ಲಿ ವರ್ಲಿ ಚಿತ್ರಾಲಂಕಾರ ಮಾಡಲಾಗಿದೆ. ಗಣಿತ ಪರಿಕರಗಳನ್ನೂ ಚಿತ್ರಿಸಲಾಗಿದೆ.
ಒಂದರಿಂದ ಏಳನೇ ತರಗತಿವರೆಗೆ 125 ವಿದ್ಯಾರ್ಥಿಗಳಿದ್ದು, ಏಳು ಮಂದಿ ಶಿಕ್ಷಕರು ಶಾಲೆಯಲ್ಲಿದ್ದಾರೆ. ಶಾಲಾಮುಖ್ಯ ಶಿಕ್ಷಕಿ ಗಾಯತ್ರಿ ವಿದ್ಯಾಭಿಮಾನಿಗಳ ಸಕ್ರಿಯ ಸಹಕಾರದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ದಿ.ಬಿ.ಯಶೋವರ್ಮ ಅವರು ಉಜಿರೆಯನ್ನು ಸಸ್ಯಕಾಶಿಯಾಗಿ ರೂಪಿಸಿದ ಚಿಂತಕ. ಶಿಕ್ಷಣತಜ್ಞರಾಗಿ, ದಕ್ಷ ಆಡಳಿತಗಾರರಾಗಿ, ಪ್ರಯೋಗಶೀಲರಾಗಿದ್ದ ಅವರು ನಿಧನರಾದ ಮೇ 23ರಂದು ಶಾಲೆಯ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.