ಮಂಗಳೂರು: ರಜಾ ಅವಧಿಯಲ್ಲಿ ಪಾವತಿಯಾಗಿರುವ ಅಂಗವಿಕಲರ ಸಂಚಾರಿ ಭತ್ಯೆಯನ್ನು ಸರ್ಕಾರಕ್ಕೆ ವಾಪಸ್ ಜಮಾ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಎಲ್ಲ ಅಂಗವಿಕಲ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿದೆ. ಒಮ್ಮೆಲೇ ದೊಡ್ಡ ಮೊತ್ತ ಪಾವತಿಸಬೇಕಾಗಿರುವ ಕಾರಣ ಶಿಕ್ಷಕರು ಚಿಂತಿತರಾಗಿದ್ದಾರೆ.
ಅಂಗವಿಕಲರ ಸಂಚಾರಿ ಭತ್ಯೆ ಪಡೆಯುತ್ತಿರುವ ಶಿಕ್ಷಕರಿಗೆ 2019ರಿಂದ 2023ರ ನಡುವಿನ ರಜಾ ಅವಧಿಯಲ್ಲಿ ಭತ್ಯೆ ಪಾವತಿಸಲಾಗಿದೆ. ಅದನ್ನು ಮರುಪಾವತಿಸುವಂತೆ ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಅದರಂತೆ ಹೆಚ್ಚುವರಿಯಾಗಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಬೇಕು ಎಂದು ಅಂಗವಿಕಲ ಶಿಕ್ಷಕರಿಗೆ ಜಾರಿಯಾಗಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದೇ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ದಿನಾಂಕದಂದು ಈ ನೋಟಿಸ್ ಜಾರಿಯಾಗಿದೆ.
‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 21ರಲ್ಲಿ ಅಂಗವಿಕಲ ನೌಕರರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಹೇಳಲಾಗಿದೆ. ನಿವೃತ್ತಿ ಅಂಚಿನಲ್ಲಿರುವ ಅಥವಾ ನಿವೃತ್ತಿಯಾಗಿರುವ ನೌಕರರಿಗೆ ಕೊಟ್ಟಿರುವ ಭತ್ಯೆ ವಾಪಸ್ ಪಡೆಯುವುದು ಅಪರಾಧ ಎಂಬ ಕೋರ್ಟ್ ಆದೇಶ ಇದೆ. ಹೀಗಾಗಿ, ಹೆಚ್ಚುವರಿಯಾಗಿ ನೀಡಿರುವ ಭತ್ಯೆಯನ್ನು ಮರು ಪಾವತಿ ಮಾಡಿಸಿಕೊಳ್ಳುವ ಬದಲಾಗಿ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮನ್ನಾ ಮಾಡಬೇಕು’ ಎಂದು ಪುತ್ತೂರಿನ ಶಿಕ್ಷಕ ಶಿವಪ್ಪ ರಾಥೋಡ್ ಒತ್ತಾಯಿಸಿದರು.
‘ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಈಗಾಗಲೇ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿ, ಬಲವಂತದಿಂದ ಹಣ ಮರುಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ಶಿಕ್ಷಕರು ಹಣ ಮರು ಪಾವತಿ ಮಾಡಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯು 66 ಜನರನ್ನು ಗುರುತಿಸಿದ್ದು, ಅವರಿಂದ ಒಟ್ಟು ₹10.45 ಲಕ್ಷ ಮೊತ್ತ ಮರುಪಾವತಿಗೆ ನೋಟಿಸ್ ಜಾರಿಗೊಳಿಸಿದೆ. ಶಿಕ್ಷಕರು ತಾವು ಪಡೆದಿರುವ ಭತ್ಯೆ ಆಧರಿಸಿ, ₹10 ಸಾವಿರದಿಂದ ₹25ಸಾವಿರದವರೆಗೆ ಹಣ ಮರುಪಾವತಿಸಬೇಕಾಗಿದೆ. ಒಮ್ಮೆಲೇ ದೊಡ್ಡ ಮೊತ್ತ ಪಾವತಿಸುವುದು ಹೊರೆಯಾಗುತ್ತಿದೆ. ಸಮಸ್ಯೆ ಸೃಷ್ಟಿ ಮಾಡಿದವರೇ ಪರಿಹಾರದ ಬಗ್ಗೆ ಯೋಚಿಸಬೇಕು’ ಎಂದು ಚಿತ್ರದುರ್ಗದ ಅಂಗವಿಕಲ ಶಿಕ್ಷಕರೊಬ್ಬರು ಆಗ್ರಹಿಸಿದರು.
‘ಆಯುಕ್ತರ ನಿರ್ದೇಶನದಂತೆ ಕ್ರಮ’
‘ಸಾಂದರ್ಭಿಕ ರಜೆ ಹೊರತುಪಡಿಸಿ ಉಳಿದ ರಜಾ ಅವಧಿಯಲ್ಲಿ ಅಂಗವಿಕಲ ಭತ್ಯೆ ನೀಡಲು ಆರ್ಥಿಕ ಇಲಾಖೆಯ 14 ಫೆಬ್ರುವರಿ 1979ರ ಆದೇಶದ ಅನ್ವಯ ಅವಕಾಶವಿಲ್ಲ. ಹೆಚ್ಚುವರಿ ಭತ್ಯೆ ಪಡೆದಿರುವ ಕೆಲ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಆದರೆ ಯಾವುದೇ ಶಿಕ್ಷಕರಿಂದ ಇನ್ನೂ ಹಣ ಮರುಪಾವತಿ ಮಾಡಿಸಿಕೊಂಡಿಲ್ಲ. ಶಿಕ್ಷಣ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.