ADVERTISEMENT

ಹಸಿರು ನೀತಿ ಪಾಲನೆಗೆ 60 ದಿನಗಳ ಗಡುವು: ನ್ಯಾಯಾಂಗ ನಿಂದನೆ ಮೊಕದ್ದಮೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 2:47 IST
Last Updated 24 ಡಿಸೆಂಬರ್ 2024, 2:47 IST
<div class="paragraphs"><p>ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ</p></div>

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ

   

ಮಂಗಳೂರು: ಹಸಿರು ಹೆದ್ದಾರಿ ನೀತಿ (2015) ಅನುಷ್ಠಾನಕ್ಕೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು (ಎನ್‌ಜಿಟಿ) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಆದೇಶ ನೀಡಿದ್ದರೂ, ಬಹುತೇಕ ಕಡೆಗಳಲ್ಲಿ ಇದು ಅನುಷ್ಠಾನಗೊಂಡಿಲ್ಲ. ಈ ಆದೇಶ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು, 60 ದಿನಗಳ ಒಳಗೆ ಜಾರಿಯಾಗದಿದ್ದರೆ, ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಎಚ್ಚರಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಬೆನೆಡಿಕ್ಟ್ ಫರ್ನಾಂಡಿಸ್, ‘ಹಸಿರು ಹೆದ್ದಾರಿ ನೀತಿ ಅನ್ವಯ, ಹೆದ್ದಾರಿ ನಿರ್ಮಾಣ, ವಿಸ್ತರಣೆ, ನೇರ ಗೊಳಿಸುವ ವೇಳೆ ಹೆದ್ದಾರಿ ಪ್ರಾಧಿಕಾರವು ನಿಯಮ ಪಾಲಿಸಬೇಕು. ಮರಗಳ ಸ್ಥಳಾಂತರಕ್ಕೆ ಎಂಪನೆಲ್‌ಮೆಂಟ್ ಏಜೆನ್ಸಿ ಮತ್ತು ನೆಡುತೋಪಿಗಾಗಿ ಪ್ರತ್ಯೇಕ ಏಜೆನ್ಸಿ ನೇಮಕಾತಿ ಮಾಡಬೇಕು, ಯೋಜನಾ ವೆಚ್ಚದ ಶೇ 1ರಷ್ಟು ಮೊತ್ತವನ್ನು ಹಸಿರು ನಿಧಿಗೆ ವರ್ಗಾಯಿಸಬೇಕು. ಎಂಪನೆಲ್‌ಮೆಂಟ್ ಏಜೆನ್ಸಿಯಿಂದ ಆಯ್ಕೆಯಾದ ವಿಶೇಷ ಗುತ್ತಿಗೆದಾರರು, ಹಸಿರು ನೀತಿಯಲ್ಲಿ ನಿಗದಿಪಡಿಸಿದ ಮಾನದಂಡಗಳು ಮತ್ತು ಟೈಮ್‌ಲೈನ್‌ಗೆ ಅನುಗುಣವಾಗಿ ಗರಿಷ್ಠ ಸಂಖ್ಯೆಯ ಮರಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಅನೇಕ ಕಡೆಗಳಲ್ಲಿ ಪರೀಕ್ಷಿಸಿದ ಇದು ಅನುಷ್ಠಾನಗೊಂಡಿಲ್ಲ’ ಎಂದರು.

ADVERTISEMENT

ಈ ಭಾಗದಲ್ಲಿ ಸಾಣೂರಿನಿಂದ ಬಿಕರ್ನಕಟ್ಟೆ ಚತುಷ್ಪಥ, ಬ್ಲ್ಯಾಕ್ ಸ್ಪಾಟ್ ತೆಗೆಯುವುದು ಮತ್ತು ಮೇಲ್ಸೇತುವೆ ನಿರ್ಮಾಣ, ಫುಲ್ಕೇರಿ, ಕಾರ್ಕಳದಿಂದ ಮಾಳಾ ಗೇಟ್‌ವರೆಗೆ ಚತುಷ್ಪಥ ನಿರ್ಮಾಣದ ವೇಳೆ ಹಸಿರು ನೀತಿ ಪಾಲನೆಯಾಗಿಲ್ಲ. ಈ ಸಂಬಂಧ ಸಂಘಟನೆಯಿಂದ 2024 ಜನವರಿ 29ಕ್ಕೆ ಇಲಾಖೆಗೆ ಸೂಚನಾಪತ್ರ ನೀಡಲಾಗಿತ್ತು. ಇಲಾಖೆ ಇದನ್ನು ಪಾಲನೆ ಮಾಡದ ಕಾರಣ, ಎನ್‌ಜಿಟಿ ಮೊರೆ ಹೋಗಲಾಯಿತು. ಎನ್‌ಜಿಟಿ ನಮ್ಮ ಮನವಿಯನ್ನು ಪುರಸ್ಕರಿಸಿ 2024 ಡಿಸೆಂಬರ್ 16ರಂದು ನೀಡಿರುವ ತೀರ್ಪಿನಲ್ಲಿ ಹಸಿರು ನೀತಿ ಅನುಷ್ಠಾನಕ್ಕೆ ಸೂಚನೆ ನೀಡಿದೆ. ಇನ್ನೂ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಕ್ರಮವಹಿಸದ ಕಾರಣ, ಸಂಘಟನೆಯು ದೆಹಲಿ, ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಅಧಿಕಾರಿಗಳಿಗೆ ಸೂಚನಾಪತ್ರ ನೀಡಿದೆ ಎಂದು ಹೇಳಿದರು. 

ದೇಶದಲ್ಲಿ 10 ವರ್ಷಗಳಲ್ಲಿ 30 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಲಾಗಿದೆ. ಹಸಿರು ನೀತಿ ಪಾಲಿಸದೆ, ಅಪಾರ ಮರಗಳನ್ನು ಕಡಿಯಲಾಗಿದೆ. ಇನ್ನೂ 1.16 ಲಕ್ಷ ಕಿ.ಮೀ. ಹೆದ್ದಾರಿ ವಿಸ್ತರಣೆ ಮತ್ತು ನಿರ್ಮಾಣ ಬಾಕಿ ಇದೆ. ಭವಿಷ್ಯದ ಯೋಜನೆಗಳ ಮೇಲೆಯೂ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಅಶ್ವಿನಿ ಭಟ್, ದಿಲೀಪ್ ನಾಯ್ಕ, ಆರತಿ ಅಶೋಕ್, ಅದಿತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.