ADVERTISEMENT

ಮದುಮಗನಿಗೆ ಕೊರಗಜ್ಜನ ವೇಷ: ಮದುಮಗಳ ಮನೆಗೆ ಮುತ್ತಿಗೆ ಯತ್ನ

ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 2:02 IST
Last Updated 8 ಜನವರಿ 2022, 2:02 IST
ಕೊರಗಜ್ಜನ ವೇಷ ಭೂಷಣ ಧರಿಸಿರುವ ಮದುಮಗ
ಕೊರಗಜ್ಜನ ವೇಷ ಭೂಷಣ ಧರಿಸಿರುವ ಮದುಮಗ   

ವಿಟ್ಲ: ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ಬುಧವಾರ ರಾತ್ರಿ ನಡೆದ ಮದುವೆ ಸಮಾರಂಭವೊಂದರ ಔತಣಕೂಟದಲ್ಲಿ ವರನಿಗೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷಹಾಕಿ, ಕೊರಗಜ್ಜನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಶುಕ್ರವಾರ ಮದುಮಗಳ ಮನೆಗೆ ಮುತ್ತಿಗೆ ಹಾಕುವ ಯತ್ನ ನಡೆಸಿದರು.

ಘಟನೆ ಸಂಬಂಧಿಸಿದಂತೆ ಕಡಂಬು ನಿವಾಸಿ ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಕಾರ್ಯದರ್ಶಿ ಚೇತನ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವರ ಉಮರುಲ್ ಭಾಷಿತ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದೆ. ಮಂಜೇಶ್ವರ ತಾಲ್ಲೂಕಿನ ಉಪ್ಪಳದ ಉಮರುಲ್ ಭಾಷಿತ್ ಎಂಬ ಯುವಕನ ಜೊತೆ ಅಝೀಝ್ ಪುತ್ರಿಯ ವಿವಾಹ ನಡೆದಿತ್ತು. ಇದರ ಔತಣಕೂಟವನ್ನು ಬುಧವಾರ ರಾತ್ರಿ ಆಯೋಜಿಸಲಾಗಿತ್ತು. ವರನು ತನ್ನ ಸ್ನೇಹಿತರೊಂದಿಗೆ ರಾತ್ರಿ ವದುವಿನ ಮನೆಗೆ ಬಂದಾಗ, ವದುವಿನ ಮನೆಯ ಮುಂಭಾಗದ ರಸ್ತೆಯಲ್ಲಿ ಕೊರಗಜ್ಜನ ವೇಷಧರಿಸಿ, ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ, ಮುಖಕ್ಕೆ ಮಸಿ ಬಳಿಕೊಂಡು ಹಾಡು ಹೇಳಿ ಕುಣಿಯುತ್ತಾ ಬಂದಿದ್ದ ಎನ್ನಲಾಗಿದೆ. ಈ ದೃಶ್ಯವನ್ನು ವರನ ಕಡೆಯವರೊಬ್ಬರು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ADVERTISEMENT

ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ, ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಘಟನೆಯನ್ನು ಖಂಡಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕ್ರಮಕ್ಕೆ ಸೂಚನೆ: ಘಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಖಂಡಿಸಿದ್ದಾರೆ. ತುಳುನಾಡಿನ ದೈವಾರಾಧನೆಯ ಬಗ್ಗೆ ವಿಕೃತಿಯನ್ನು ಮೆರೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಪಿಎಫ್‌ಐ ಖಂಡನೆ: ‘ಇದು ಇಸ್ಲಾಮಿನ ಚೌಕಟ್ಟನ್ನು ಮೀರಿದ್ದು, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಆಯಾ ಜಮಾತಿನ ಸಮಿತಿಗಳು ಮುನ್ನಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪಿಎಫ್‌ಐ ಒತ್ತಾಯಿಸಿದೆ. ಈ ಘಟನೆಗೆ ಸಂಬಂಧಿಸಿ ಕೋಮುಭಾವನೆ ಕೆರಳಿಸುವ ಉದ್ದೇಶ ದಿಂದ ಮದುಮಗಳ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದನ್ನು ಪಿಎಫ್‌ಐ ಖಂಡಿಸುತ್ತದೆ ಎಂದು ವಿಟ್ಲ ಘಟಕದ ಅಧ್ಯಕ್ಷ ಶಾಫಿ ಮಾಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.