ಮಂಗಳೂರು: ನಿತ್ಯವೂ 8 ಅವಧಿ ಪಾಠ ಮಾಡಲೇಬೇಕು, ಸರ್ಕಾರಿ ರಜಾ ದಿನ ಬಿಟ್ಟು ತಿಂಗಳಿಗೆ ಒಂದು ರಜೆ ಇದೆ. ಬೇರೆ ಯಾವುದಕ್ಕೂ ರಜೆ ತೆಗೆದುಕೊಳ್ಳಲು ಅವಕಾಶ ಇಲ್ಲ. ಕೆಲವರಿಗೆ 6 ತಿಂಗಳಿಂದ ಗೌರವ ಧನವೂ ಲಭಿಸಿಲ್ಲ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಇಂಥ ಪರಿಸ್ಥಿತಿಯನ್ನು ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಪತ್ರಿಕಾಗಷ್ಠಿಯಲ್ಲಿ ಶನಿವಾರ ತೆರೆದಿಟ್ಟರು.
‘2012ರಿಂದ ರಾಜ್ಯದಲ್ಲಿ 43 ಸಾವಿರ ಮತ್ತು ಜಿಲ್ಲೆಯಲ್ಲಿ 900 ಮಂದಿ ಅತಿಥಿಗಳಾಗಿ ಪಾಠ ಮಾಡುತ್ತಿದ್ದೇವೆ. ಆರಂಭದಲ್ಲಿ ₹ 5500 ಗೌರವ ಧನ ಇತ್ತು. ಹೋರಾಟದ ನಂತರ ಅದು ₹ 7500ಕ್ಕೆ ಏರಿತು. ಎರಡು ವರ್ಷಗಳ ಹಿಂದೆ ₹ 10 ಸಾವಿರ ಮಾಡಲಾಗಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟ ಆಗುತ್ತಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ದಯಾಮಣಿ ಕೆ ಹೇಳಿದರು.
‘ಈಚೆಗೆ ಶಿಕ್ಷಕರನ್ನು ನೇಮಕ ಮಾಡುವ ಸಂದರ್ಭದಲ್ಲಿ ನಮ್ಮನ್ನು ಪರಿಗಣಿಸಲಿಲ್ಲ. ಅನುಭವ ಇದ್ದರೂ ಟಿಇಟಿ ಪಾಸಾಗದೆ ಶಿಕ್ಷಕರಾಗಿ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಂದು ಶಾಲೆಯಲ್ಲಿ 10 ತಿಂಗಳು ಮಾತ್ರ ಸೇವೆ ಸಲ್ಲಿಸಲು ಅವಕಾಶ. ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲು ಬೇರೆ ಶಾಲೆಯಲ್ಲಿ ಸೇರಿಕೊಳ್ಳಬೇಕು. ಹೊಸ ಶಿಕ್ಷಕರ ನೇಮಕಾತಿ ಆದರೆ ಅವರು ಬಂದ ಕೂಡಲೇ ಯಾವುದೇ ಮುಲಾಜಿಲ್ಲದೆ ನಮ್ಮನ್ನು ಕಳುಹಿಸುತ್ತಾರೆ. ಇದರಿಂದ ಒಮ್ಮೆಲೇ ಆಘಾತ ಆಗುತ್ತದೆ. ಯಾವುದಾದರೂ ಅಂಗಡಿಯಲ್ಲಿ ಕೆಲಸಕ್ಕೆ ಸೇರೋಣ ಎಂದುಕೊಂಡರೆ ಶಿಕ್ಷಕರು ಎಂಬ ಗೌರವರಿಂದ ಅವರು ಕೆಲಸಕ್ಕೆ ನಿಲ್ಲಿಸಲು ಹಿಂಜರಿಯುತ್ತಾರೆ’ ಎಂದು ಅವರು ತಿಳಿಸಿದರು.
‘ಮೊದಲ ಪಟ್ಟಿಯಲ್ಲಿ ಕೆಲಸಕ್ಕೆ ಸೇರಿದವರಿಗೆ ಕಳೆದ ವರ್ಷದ ಅಕ್ಟೋಬರ್ ನಂತರದಿಂದ ಮತ್ತು ಎರಡನೇ ಪಟ್ಟಿಯಲ್ಲಿ ಇರುವವರಿಗೆ 6 ತಿಂಗಳಿಂದ ಗೌರವ ಧನ ಸಿಗಲಿಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಹೋರಾಟ ನಡೆಸಲಾಗುವುದು. ಮೆರಿಟ್ ಪದ್ಧತಿ ಕೈಬಿಟ್ಟು ಅನುಭವದ ಆಧಾರದಲ್ಲಿ ನೇಮಕಾತಿ ಮಾಡಬೇಕು, ಸೇವೆಗೆ ಪ್ರಮಾಣ ಪತ್ರ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು, ಗೌರವ ಧನ ಹೆಚ್ಚಿಸಿ ಪ್ರತಿ ತಿಂಗಳು ಸಮರ್ಪಕವಾಗಿ ವಿತರಿಸಬೇಕು’ ಎಂದು ಅವರು ಆಗ್ರಹಿಸಿದರು.
ಸಂಘದ ಅಧ್ಯಕ್ಷೆ ಚಂದ್ರಿಕಾ, ಸದಸ್ಯರಾದ ಪ್ರಮೀಳಾ, ಅಮಿತಾ ಮತ್ತು ರೇವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.