ADVERTISEMENT

ಚುನಾವಣಾ ಬಹಿಷ್ಕಾರ: ಗುತ್ಯಡ್ಕ ನಿವಾಸಿಗಳ ನಿರ್ಧಾರ

ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಗೆ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 5:48 IST
Last Updated 18 ಏಪ್ರಿಲ್ 2024, 5:48 IST
ಗುತ್ಯಡ್ಕದ ಕಾಂಕ್ರೀಟ್‌ ರಸ್ತೆಯ ತಳದಲ್ಲಿ ಮಣ್ಣು ಕೊಂಚಿಕೊಂಡು ಹೋಗಿರುವುದು
ಗುತ್ಯಡ್ಕದ ಕಾಂಕ್ರೀಟ್‌ ರಸ್ತೆಯ ತಳದಲ್ಲಿ ಮಣ್ಣು ಕೊಂಚಿಕೊಂಡು ಹೋಗಿರುವುದು   

ಮಂಗಳೂರು: ‘ತಮ್ಮ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ ಹಾಗೂ ಗ್ರಾಮದ ಬಗ್ಗೆ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ’ ಎಂದು ಆರೋಪಿಸಿರುವ ಎಳನೀರು ಗ್ರಾಮದ ಗುತ್ಯಡ್ಕ ನಿವಾಸಿಗಳು ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 

ಈ ಗ್ರಾಮದ ನಿವಾಸಿಗಳು 15 ವರ್ಷಗಳಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳುತ್ತಿರುವುದು ಇದು ಮೂರನೇ ಸಲ.

‘ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ಯಡ್ಕ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಸಂಸೆ ಗ್ರಾಮಗಳನ್ನು ಸಂಪರ್ಕಿಸಲು ಸುಸಜ್ಜಿತ ರಸ್ತೆ ಇಲ್ಲ. ನಾವಿಲ್ಲಿ ಕಾಡುಪ್ರಾಣಿಗಳ ಭಯದ ನೆರಳಿನಲ್ಲೇ ಬದುಕಬೇಕಾದ ಸ್ಥಿತಿ ಇದೆ’ ಎಂದು ಗ್ರಾಮದ ಹಿರಿಯರಲ್ಲಿ ಒಬ್ಬರಾದ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಈ ರಸ್ತೆ ಅಭಿವೃದ್ಧಿಯಾದರೆ ಗುತ್ಯಕ್ಕ, ಉಕ್ಕುಡ, ಕುರೆಕಲ್ಲು, ಕುಡ್ಚಾರು ಪ್ರದೇಶದ 80 ಮನೆಗಳಿಗೆ, ಚಾರಣದ ಹೆಸರುವಾಸಿ ತಾಣವಾದ ‘ನೇತ್ರಾವತಿ ಬಿಂದು’ವಿಗೆ,  ತೀರ್ಥಕ್ಷೇತ್ರಕ್ಕೆ, ಅಂಗನವಾಡಿ, ಪ್ರಾಥಮಿಕ ಶಾಲೆಗೆ  ಸಂಪರ್ಕ ಸುಧಾರಿಸಲಿದೆ. ಈ ಕಾಲದಲ್ಲೂ ರೋಗಿಗಳನ್ನು ಅಥವಾ  ಹಾವು ಕಡಿತಕ್ಕೆ ಒಳಗಾದವರನ್ನು ಡೋಲಿಯಲ್ಲಿ ಹೊತ್ತೊಯ್ಯಬೇಕಾದ ಸ್ಥಿತಿ ನಮ್ಮೂರಿನಲ್ಲಿದೆ’ ಎಂದು ಕುರೆಕಲ್ಲು ಗ್ರಾಮದ ಮಹೇಶ್‌ ತಿಳಿಸಿದರು.

‘ಇಲ್ಲಿರುವ ಕಿರಿದಾದ ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆ ಪಕ್ಕದಲ್ಲಿ ಕಡಿದಾದ ಕಣಿವೆ ಇದ್ದರೂ, ಅದಕ್ಕೆ ತಡೆಗೋಡೆ ಇಲ್ಲ. ಆಟೊ ರಿಕ್ಷಾ ಚಾಲಕರೂ ಈ ರಸ್ತೆಯನ್ನು ಬಳಸುವುದಕ್ಕೆ ಹಿಂದೇಟು ಹಾಕುತ್ತಾರೆ’ ಎಂದು ಗಣೇಶ್ ದೂರಿದರು.

‘ನಾವು ಮನೆಗೆ ಏನಾದರೂ ಸಾಮಗ್ರಿ ಸಾಗಿಸಬೇಕಾದರೆ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಬಾಡಿಗೆ ಪಾವತಿಸಬೇಕಾಗುತ್ತದೆ’ ಎಂದು ಜಯವಂತ್‌ ತಿಳಿಸಿದರು.  ಸಾಮಗ್ರಿಗಳ ಸಾಗಣೆ ವೆಚ್ಚ ದುಬಾರಿಯಾಗಿದ್ದರಿಂದ ಅವರ ಮನೆಯ ದುರಸ್ತಿ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.

‘ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಹರಸಾಹಸಪಡಬೇಕು. ಇಲ್ಲಿನ ರಸ್ತೆಯಲ್ಲಿ ಸಾಗುವಾಗ ದ್ವಿಚಕ್ರ ವಾಹನದ ಚಕ್ರವು ಜಾರುತ್ತದೆ. ಅಡಿಯಿಂದ ಮುಡಿಯವರೆಗೆ ಕೆಸರಿನ ಸಿಂಚನವಾಗಿರುತ್ತದೆ’ ಎಂದು ಸತೀಶ್‌ ವಿವರಿಸಿದರು. 

‘2009ರಲ್ಲೂ ಲೋಕಸಭಾ ಚುನಾವಣೆ ಹಾಗೂ ಪಂಚಾಯಿತಿ ಚುನಾವಣೆಗಳನ್ನು ನಾವು ಬಹಿಷ್ಕರಿಸಿದ್ದೆವು. 2013–14ರಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಗ್ರಾಮದ ಬಹುತೇಕ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿತು. ಗ್ರಾಮದ ಕೆಲವು ಕಡೆ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾದವು’ ಎಂದು ಮಹೇಶ್‌ ನೆನಪಿಸಿಕೊಂಡರು. 

‘ಅಂದಿನಿಂದ ಇದುವೆಗೂ ಈ ರಸ್ತೆ ದುರಸ್ತಿ ಕಂಡಿಲ್ಲ. ನಮ್ಮ ಬೇಡಿಕೆಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾಡಳಿತ  ಸ್ಪಂದಿಸಿಲ್ಲ. ನಾವು ಈ ವರ್ಷದ ಫೆಬ್ರುವರಿಯಲ್ಲಿ  ₹ 80ಸಾವಿರ ವಂತಿಗೆ ಸಂಗ್ರಹಿಸಿ ವಾಹನಗಳು ಚಲಿಸುವ ಮಟ್ಟಿಗೆ ರಸ್ತೆಯನ್ನು ತಕ್ಕಮಟ್ಟಿಗೆ ದುರಸ್ತಿ ಮಾಡಿದ್ದೇವೆ. ಕಾಂಕ್ರೀಟ್‌ ರಸ್ತೆಯ ತಳದಲ್ಲಿ ಮಣ್ಣಿನ ಸವಕಳಿಯಿಂದ ಮಳೆಗಾಲದಲ್ಲಿ ಇಲ್ಲಿ ಭೂಕುಸಿತ ಆಗುವ ಅಪಾಯವೂ ಇದೆ‘ ಎಂದು ಅವರು ಎಚ್ಚರಿಸಿದರು. 

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ನೇತೃತ್ವದ ನಿಯೋಗವು ಗ್ರಾಮಸ್ಥರನ್ನು ಮಂಗಳವಾರ ಭೇಟಿ ಯಾಗಿದ್ದು, ‘ಚುನಾವಣಾ ಬಹಿಷ್ಕಾರದ ನಿರ್ಧಾರವನ್ನು ಕೈಬಿಡುವಂತೆ ಮನವೊಲಿಸಲು ಯತ್ನಿಸಿದೆ. 

ಗುತ್ಯಡ್ಕ– ಕುರೆಕಲ್ಲು–ಕುಡ್ಚಾರು– ರಸ್ತೆಯ ದುಸ್ಥಿತಿಯನ್ನು ಸ್ಥಳೀಯ ನಿವಾಸಿ ಸತೀಶ್ ಅವರು ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವಿಜಯನ್ ನೇತೃತ್ವದ ನಿಯೋಗಕ್ಕೆ ಮಂಗಳವಾರ ವಿವರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.