ADVERTISEMENT

ಮಂಗಳೂರು: ಪರಿಸರಕ್ಕೆ ಬಟ್ಟೆ ಬ್ಯಾಗ್‌ಗಳ ‘ಸಂಜೀವಿನಿ’

ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮ ಪಂಚಾಯಿತಿಯ ಮನೆ, ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ನಿಷೇಧ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:34 IST
Last Updated 4 ಜೂನ್ 2023, 16:34 IST

ಮಂಗಳೂರು: ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದಲ್ಲಿ ಈ ಬಾರಿಯ ಪರಿಸರ ದಿನಾಚರಣೆಯ ಸಂಭ್ರಮಕ್ಕೆ ವಿಶಿಷ್ಟ ಅರ್ಥವಿದೆ. ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಪೆಡಂಭೂತವನ್ನು ಓಡಿಸಲು ಗ್ರಾಮ ಪಂಚಾಯಿತಿಯವರು ಕೈಗೊಂಡ ಆಂದೋಲನಕ್ಕೆ ಇಲ್ಲಿ ಫಲ ಸಿಕ್ಕಿದೆ. ಗ್ರಾಮದ ಎಲ್ಲ ಮನೆಗಳು ಮತ್ತು ಅಂಗಡಿಗಳಲ್ಲಿ ಈಗ ಪ್ಲಾಸ್ಟಿಕ್ ಬದಲಿಗೆ ಬಟ್ಟೆಯ ಚೀಲಗಳು ರಾರಾಜಿಸುತ್ತಿವೆ. 

ಜನರು ಪ್ರತಿಯೊಂದಕ್ಕೂ ಪ್ಲಾ‌ಸ್ಟಿಕ್ ಚೀಲಗಳನ್ನು ಆಶ್ರಯಿಸುವುದನ್ನು ಕಂಡು ರೋಸಿಹೋಗಿದ್ದ ಗ್ರಾಮ ಪಂಚಾಯಿತಿಯವರು ಮನೆ ಮನೆಗೆ ಬಟ್ಟೆ ಚೀಲ ಕೊಡುವುದಕ್ಕೆ ಮುಂದಾಗಿದ್ದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಯೋಜನೆಯ ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರ ಮೂಲಕ ಬಟ್ಟೆ ಬ್ಯಾಗ್‌ಗಳನ್ನು ತಯಾರು ಮಾಡಲು ನಿರ್ಧರಿಸಲಾಯಿತು.

ಯೋಜನೆಯಡಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಚೀಲಗಳನ್ನು ತಯಾರಿಸುವ ಕೆಲಸ ಆರಂಭವಾಯಿತು. ಅಂಗಡಿಗೆ ಹೋಗುವಾಗ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವುದಕ್ಕೆ ಅಭ್ಯಾಸ ಮಾಡಿಸಲು ಮತ್ತು ಪ್ಲಾಸ್ಟಿಕ್ ಬ್ಯಾಗ್ ಕೊಡುವಂತೆ ಅಂಗಡಿಯವರನ್ನು ಒತ್ತಾಯಿಸದಂತೆ ಜಾಗೃತಿ ಮೂಡಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಂಡ ಕಾರಣ ಯೋಜನೆ ಯಶಸ್ಸು ಕಂಡಿದೆ.

ADVERTISEMENT

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,600 ಮನೆ ಮತ್ತು 150 ಅಂಗಡಿಗಳು ಇವೆ. ಅರಂಭದ ಘಟ್ಟದಲ್ಲಿ 9 ಸಾವಿರ ಬ್ಯಾಗ್‌ಗಳನ್ನು ತಯಾರು ಮಾಡಲು ಸಂಜೀವಿನಿ ಸ್ವಸಹಾಯ ಸಂಘದವರಿಗೆ ಸೂಚಿಸಲಾಗಿತ್ತು. ಕೆಲವೇ ತಿಂಗಳಲ್ಲಿ ಎಲ್ಲ ಕಡೆಗೂ ಬ್ಯಾಗ್ ಹಂಚಲಾಗಿದೆ. ಎಲ್ಲ ಕಡೆ ಜಾಗೃತಿ ಮೂಡಿರುವುದರಿಂದ ನಮಗೆಲ್ಲ ಖುಷಿಯಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಗ್‌ಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ತುಂಬೆ ಅವರು ಹೆಚ್ಚು ಕಾಳಜಿ ವಹಿಸಿದರು. ‘ಉಚಿತವಾಗಿ ನೀಡಿದರೆ ಬ್ಯಾಗ್‌ಗಳನ್ನು ಬಳಸದೇ ಬಿಸಾಕುವ ಸಾಧ್ಯತೆ ಇದೆ. ಆದ್ದರಿಂದ ₹80ಕ್ಕೆ 3 ಬ್ಯಾಗ್ ಕೊಡಲು ನಿರ್ಧರಿಸಲಾಯಿತು. ಮಾರಾಟದಿಂದ ಬಂದ ಹಣವನ್ನು ಸಂಜೀವಿನಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲು ನಿರ್ಧರಿಸಲಾಗಿದೆ’ ಎಂದು ಚಂದ್ರಾವತಿ ವಿವರಿಸಿದರು. 

‘ಆರು ಮಂದಿ ಬ್ಯಾಗ್ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಇದಕ್ಕೆ ಬೇಕಾದ ಬಟ್ಟೆ ತಂದುಕೊಡಲು ಅಧ್ಯಕ್ಷರು ಮುತುವರ್ಜಿ ವಹಿಸಿದ್ದಾರೆ. ಹೊಲಿಗೆಯಲ್ಲಿ ಎಲ್ಲರೂ ಅನುಭವಿಗಳು ಆಗಿರುವುದರಿಂದ ಎಷ್ಟು ಬ್ಯಾಗ್ ಬೇಕಾದರೂ ಒದಗಿಸಲು ಸಿದ್ಧ’ ಎಂದು ಸಂಜೀವಿನಿ ಸ್ವಸಹಾಯ ಸಂಘದ ಮಾಲತಿ ತಿಳಿಸಿದರು.

ಪ್ಲಾಸ್ಟಿಕ್ ನಿರ್ಮೂಲನೆಗೆ ‘ಮಿಷನ್‌ ಲೈಫ್’

ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಮಿಷನ್‌ ಲೈಫ್ ಯೋಜನೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ. ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿ ತುಂಬಿರುವ ತ್ಯಾಜ್ಯ ಮತ್ತು ಚರಂಡಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತೆರವುಗೊಳಿಸುವಂತೆ ಅವರು ತಿಳಿಸಿದ್ದಾರೆ.

ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಯವರು ಪ್ರತಿ ತಿಂಗಳಲ್ಲಿ ನಡೆಯುವ ಸಭೆಯ ನಡಾವಳಿಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪ್ರತಿನಿಧಿಗಳು, ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹವಾಮಾನ ಬದಲಾವಣೆ ಮತ್ತು ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸಬೇಕು ಎಂದು ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.