
ಪುತ್ತೂರು: ಏ.9ರಿಂದ 12ರವರೆಗೆ ನಡೆಯಲಿರುವ ಹನುಮಗಿರಿಯ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದು ಇತಿಹಾಸ ಸೃಷ್ಟಿಸಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಹನುಮಗಿರಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹನುಮಗಿರಿಯಲ್ಲಿ ಮಂಗಳವಾರ ನಡೆದ ಸರ್ವಗ್ರಾಮ ಭಕ್ತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಜಪದೀಕ್ಷೆ ಹಾಗೂ ಲಕ್ಷೊತ್ತರ ನಾರಿಕೇಳ ಸಮರ್ಪಣಾ ಕಾರ್ಯಕ್ರಮ ಮಾರ್ಚ್ 2ರಂದು ಕ್ಷೇತ್ರದಲ್ಲಿ ನಡೆಯಲಿದೆ. ಅಂದು ಪಾಲ್ಗೊಳ್ಳಲು ಸಾಧ್ಯವಾಗದ ಭಕ್ತರು ಬೇರೆ ದಿನಗಳಲ್ಲೂ ರಾಮ ಜಪದೀಕ್ಷೆ ಸ್ವೀಕರಿಸಬಹುದು. ರಾಮ ಜಪದೀಕ್ಷೆಗೆ ಕಡ್ಡಾಯ ದಿನವಿಲ್ಲ. ಸೂತಕ ಎಂಬುದೂ ಇಲ್ಲ. ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ದಿನದಂದು ಅಖಂಡ ಭಜನಾ ಕಾರ್ಯಕ್ರಮ ನಡೆಸುವ ಕುರಿತು ಮುಂದೆ ನಿರ್ಧರಿಸಲಾಗುವುದು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಹನುಮಗಿರಿ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಈಗಾಗಲೇ 43 ಗ್ರಾಮಗಳಲ್ಲಿ ಗ್ರಾಮ ಸಮಿತಿ ರಚಿಸಲಾಗಿದೆ. 60 ಗ್ರಾಮ ಸಮಿತಿಗಳನ್ನು ರಚಿಸುವ ಗುರಿ ಇದೆ. ವಿಭಾಗಾವಾರು ಬೈಠಕ್ ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಬ್ರಹ್ಮಕಲಶೋತ್ಸವ, ಕೋಟಿ ಶ್ರೀರಾಮ ತಾರಕ ಮಹಾಯಜ್ಞ, ಲಕ್ಷೊತ್ತರ ನಾರಿಕೇಳ ಸಮರ್ಪಣಾ ಕಾರ್ಯಕ್ರಮಗಳು ನಡೆಯಲಿದ್ದು, ಹನುಮಗಿರಿಯ ಬ್ರಹ್ಮಕಲಶೋತ್ಸವ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅವರು ಗ್ರಾಮ ಸಮಿತಿಗಳ ಕುರಿತು, ಮುರಳೀಕೃಷ್ಣ ಹಸಂತಡ್ಕ ಅವರು ಅಯೋಧ್ಯೆಯಿಂದ ರಾಮನವಮಿಯಂದು ಕ್ಷೇತ್ರಕ್ಕೆ ಬರಲಿರುವ ಶ್ರೀರಾಮ ಜ್ಯೋತಿ, ಆಂಜನಾದ್ರಿಯಿಂದ ಬರುವ ಹನುಮಜ್ಯೋತಿ ಕುರಿತು, ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಕೋಟಿ ಶ್ರೀರಾಮ ತಾರಕ ಜಪಯಜ್ಞದ ಕುರಿತು, ಅರುಣ್‌ಕುಮಾರ್ ಪುತ್ತಿಲ ಅವರು ಲಕ್ಷೊತ್ತರ ನಾರೀಕೇಳ ಸಮರ್ಪಣಾ ಕಾರ್ಯಕ್ರಮದ ಕುರಿತು, ಪರಮೇಶ್ವರಿ ಭಟ್ ಅವರು ಭಜನಾ ಕಾರ್ಯಕ್ರಮದ ಕುರಿತು ಹಾಗೂ ಮಹಿಳಾ ಸಮಿತಿಯ ಸಂಚಾಲಕಿ ವಿದ್ಯಾ ಆರ್.ಗೌರಿ ಅವರು ಮಹಿಳಾ ಸಮಿತಿ ಕುರಿತು ತಿಳಿಸಿದರು.
ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಜಪದೀಕ್ಷೆ ಹಾಗೂ ಲಕ್ಷೊತ್ತರ ನಾರಿಕೇಳ ಸಮರ್ಪಣಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ಸುಬ್ಬಪ್ಪ ಪಾಟಾಳಿ, ನಹುಷಾ ಭಟ್, ಪ್ರವೀಣ್ ಸರಳಾಯ, ಸವಿತಾ ರೈ, ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಮ್ ಪಿ., ಶಿವರಾಮ ಶರ್ಮ ಕತ್ರಿಬೈಲು ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ವಂದಿಸಿದರು. ಸಾಮಾಜಿಕ ಜಾಲತಾಣ ಸಮಿತಿಯ ಹರಿಪ್ರಸಾದ್ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ವಿವಿಧ ಸಮಿತಿಗಳ ವಿಭಾಗಾವಾರು ಬೈಠಕ್ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.