ADVERTISEMENT

ಮಂಗಳೂರು: ಹೆದ್ದಾರಿ ಬದಿಯಲ್ಲಿ ‘ಸರ್ವಿಸ್‌’ ಸಂಕಷ್ಟ

ಮಂಗಳೂರು ನಗರದಿಂದ ಹೊರ ಹೋಗುವ ದಾರಿಗಳಲ್ಲಿ ರಾಂಗ್ ಸೈಡ್‌ನಿಂದ ಬರುವ ವಾಹನಗಳ ಕಾಟ- ಹೊಂಡಗಳ ಸಮಸ್ಯೆ

ವಿಕ್ರಂ ಕಾಂತಿಕೆರೆ
Published 19 ಫೆಬ್ರುವರಿ 2024, 6:47 IST
Last Updated 19 ಫೆಬ್ರುವರಿ 2024, 6:47 IST
ಮಂಗಳೂರಿನ ಸರ್ವಿಸ್‌ ರಸ್ತೆಯೊಂದರಲ್ಲಿ ವಿರುದ್ಧ ದಿಕ್ಕಿನಿಂದ ನುಗ್ಗುತ್ತಿರುವ ಕಾರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್
ಮಂಗಳೂರಿನ ಸರ್ವಿಸ್‌ ರಸ್ತೆಯೊಂದರಲ್ಲಿ ವಿರುದ್ಧ ದಿಕ್ಕಿನಿಂದ ನುಗ್ಗುತ್ತಿರುವ ಕಾರು –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್   

ಮಂಗಳೂರು: ಹೊಂಡಗಳಿಗೆ ಬಿದ್ದು ನಿಧಾನಕ್ಕೆ ಎದ್ದು ಮುಂದೆ ಸಾಗುವ ವಾಹನಗಳು... ಲಗಾಮು ಹಾಕದ ಕುದುರೆಯಂತೆ ಎದುರು ಭಾಗದಿಂದ ನುಗ್ಗಿ ಬರುವ ದ್ವಿಚಕ್ರ ವಾಹನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಚಾಲಕರು... ಮುಖ್ಯರಸ್ತೆಗೆ ಸೇರುವಲ್ಲಿ ಗೊಂದಲದಿಂದ ವಾಹನದ ವೇಗಕ್ಕೆ ಬ್ರೇಕ್ ಹಾಕಿಯೇ ಮುಂದೆ ಸಾಗುವವರು...

ಜಿಲ್ಲೆಯ ಹೆದ್ದಾರಿಗಳ ಬದಿಯಲ್ಲಿರುವ ಸರ್ವಿಸ್ ರಸ್ತೆಗಳಲ್ಲಿ ಸಾಗುವವರ ಸಂಕಷ್ಟ ಒಂದೆರಡಲ್ಲ. 

ನಗರದೊಳಗಿನ ಪ್ರಮುಖ ಸರ್ವಿಸ್ ರಸ್ತೆಗಳ ಪೈಕಿ ಬಿಕರ್ನಕಟ್ಟೆ, ಕುಂಟಿಕಾನ ಮುಂತಾದ ಕಡೆಗಳಲ್ಲಿ ಕೆಲವು ದಿನಗಳ ಹಿಂದೆ ಡಾಂಬರು ಹಾಕಿದ್ದರಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿ ವರ್ಷಗಳಿಂದ ಗುಂಡಿಗಳನ್ನು ತಪ್ಪಿಸುತ್ತ ಸಾಗಿದ ಚಾಲಕರ ಪಾಡು ಹೇಳತೀರದು. ಕೆಲವು ಕಡೆಗಳಲ್ಲಿ ಡಾಂಬರು ಹಾಕಿದ್ದರೂ ಇನ್ನೂ ಅನೇಕ ಭಾಗದಲ್ಲಿ ಗುಂಡಿಗಳು ಬಾಕಿ ಉಳಿದಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮೂಲಕ ಸಾಗುವ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಗಳ ಪೈಕಿ ಕೆಲವು ಕಡೆಗಳಲ್ಲಂತೂ ವಾಹನಗಳು ತುಂಬ ತೊಂದರೆಗೆ ಸಿಲುಕುತ್ತಿವೆ.

ADVERTISEMENT

ಕೆಲವು ಸರ್ವಿಸ್ ರಸ್ತೆಗಳು ಅಪಘಾತ ವಲಯಗಳಾಗಿ ಕಾಡುತ್ತಿವೆ. ಕೆಲವು ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆಗಳು ಅಲ್ಲಿಲ್ಲಿ ಮಾಯವಾಗಿವೆ. ಇದೆಲ್ಲವೂ ಸುಗಮ ಮತ್ತು ನಿರಾಯಾಸ ಪ್ರಯಾಣಕ್ಕೆ ಅಡ್ಡಿಯಾಗುತ್ತಿದೆ. 

ಮಂಗಳೂರಿನಿಂದ ಹೊರಹೋಗುವ ಮೂರು ಪ್ರಮುಖ ಹೆದ್ದಾರಿಗಳ ಪೈಕಿ ಬೆಂಗಳೂರು–ಮೈಸೂರು ಕಡೆಗೆ ಸಾಗುವ ರಸ್ತೆ (ಎನ್‌.ಎಚ್‌ 75) ಬಹುತೇಕ ಸುರಕ್ಷಿತವಾಗಿದೆ. ಕೇರಳಕ್ಕೆ ಹೋಗುವ ರಸ್ತೆಯಲ್ಲಿ (ಎನ್‌ಎಚ್‌ 66) ಗಡಿಭಾಗ ತಲಪಾಡಿವರೆಗೂ ಅಧ್ವಾನಗಳೇ ತುಂಬಿವೆ. ಮಂಗಳೂರು– ಸೊಲ್ಲಾಪುರ (ಎನ್‌ಎಚ್‌ 169) ಹೆದ್ದಾರಿಯಲ್ಲಿ ಸುರತ್ಕಲ್ ತನಕ ತೊಂದರೆ. 

ರಾಂಗ್ ಸೈಡ್‌ ಕಾಟ:

ಕೇರಳಕ್ಕೆ ಹೋಗುವ ಹೆದ್ದಾರಿಯಲ್ಲಿ ಪಂಪ್‌ವೆಲ್‌ನಿಂದ ಆರಂಭಗೊಳ್ಳುವ ಸರ್ವಿಸ್ ರಸ್ತೆ ಸ್ವಲ್ಪ ದೂರ ಮುಕ್ತಾಯವಾಗುತ್ತದೆ. ಅದು ಮುಖ್ಯ ರಸ್ತೆಯನ್ನು ಸೇರುವ ಜಾಗ ಅಪಾಯಕಾರಿ. ಬಲಭಾಗದ ಸರ್ವಿಸ್ ರಸ್ತೆಯ ಮೂಲಕ ಸಾಗುವ ವಾಹನಗಳು ಮತ್ತೊಂದು ಕಡೆಗೆ ಕ್ರಾಸ್ ಆಗಲು ಇಲ್ಲೇ ರಸ್ತೆಯನ್ನು ತೆರೆದಿರುವುದರಿಂದ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇಲ್ಲಿ ಆತಂಕ ಒಡ್ಡಿವೆ. 

ಇದಾದ ನಂತರ ಸರ್ವಿಸ್ ರಸ್ತೆ ಆರಂಭವಾಗುವುದು ತೊಕ್ಕೊಟ್ಟಿನಿಂದ. ಅಲ್ಲಿಂದ ಕಾಪಿಕಾಡ್‌ವರೆಗೆ ಮುಂದುವರಿಯುವ ರಸ್ತೆ ನಂತರ ಆರಂಭವಾಗುವುದು ಅಡ್ಡಬೈಲ್‌ನಿಂದ. ಆ ಮೇಲೆ ಅಲ್ಲಿಲ್ಲಿ ಗೋಚರಿಸುತ್ತದೆ. ಆದರೆ ಇಲ್ಲಿ ಉದ್ದಕ್ಕೂ ರಾಂಗ್ ಸೈಡ್ ಡ್ರೈವಿಂಗ್ ಸಮಸ್ಯೆ. ಆಟೊಗಳು ಮತ್ತು ದ್ವಿಚಕ್ರ ವಾಹನಗಳು ಎದುರು ಭಾಗದಿಂದ ಬರುವುದರಿಂದಾಗಿ ಸರ್ವಿಸ್ ರಸ್ತೆ ಬಳಕೆದಾರರು ಬೆದರುತ್ತಲೇ ಹೋಗಬೇಕಾಗುತ್ತದೆ.

ತಲಪಾಡಿಯಿಂದ ಮಂಗಳೂರು ಕಡೆಗೆ ಬರುವಾಗಲೂ ಸೋಮೇಶ್ವರ, ತೊಕ್ಕೊಟ್ಟು ಮತ್ತು ಏಷ್ಯನ್ ಫಿಶರೀಸ್ ಕಾಲೇಜು ಮುಂಭಾಗದಲ್ಲಿ ಸರ್ವಿಸ್ ರಸ್ತೆ ಗೋಚರಿಸುತ್ತದೆ.

‘ಸರ್ವಿಸ್ ಇಲ್ಲದ ಕಡೆ ಹೆದ್ದಾರಿಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ದೊಡ್ಡ ಸಮಸ್ಯೆ. ಪೊಲೀಸರು ದಂಡ ಹಾಕುತ್ತಿರುವುದು ಪ್ರಾಮಾಣಿಕರಿಗೆ ಸಮಾಧಾನ ಉಂಟುಮಾಡಿದೆ. ಆದರೂ ಈ ಸಮಸ್ಯೆಯನ್ನು ಸಂಪೂರ್ಣ ತೊಡೆದು ಹಾಕಲು ಆಗುತ್ತಿಲ್ಲ. ರಸ್ತೆಯ ಅಲ್ಲಲ್ಲಿ ಹೊಂಡ ಬಿದ್ದಿರುವುದು ಮತ್ತು ಅಭಿವೃದ್ಧಿ ಕೆಲಸ ಪೂರ್ಣಗೊಳಿಸದೇ ಇರುವುದರಿಂದ ತುಂಬ ತೊಂದರೆ ಆಗುತ್ತಿದೆ’ ಎನ್ನುತ್ತಾರೆ, ತಲಪಾಡಿಯ ಕೆ.ಸಿ. ರೋಡ್ ನಿವಾಸಿ ಮೊಹಮ್ಮದ್ ಆದಂ.

ಗೊಂದಲ ಉಂಟುಮಾಡುವ ಜಂಕ್ಷನ್‌

ಮಂಗಳೂರು ನಗರದಿಂದ ಸುರತ್ಕಲ್ ವರೆಗೆ ಸರ್ವಿಸ್ ರಸ್ತೆಗಳು ಅಧೋಗತಿ ಹೊಂದಿವೆ. ಸುರತ್ಕಲ್ ಭಾಗದಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ ನಂತರ ಸವಾರರು ಗೊಂದಲಕ್ಕೆ ಈಡಾಗಿದ್ದಾರೆ. ಹಳೆಯಂಗಡಿ ಭಾಗದಿಂದ ಸುರತ್ಕಲ್ ಪೇಟೆಗೆ ಬರುವವರು ಫ್ಲೈ ಓವರ್ ಬದಿಯ ಸರ್ವಿಸ್ ರಸ್ತೆಯಲ್ಲಿ ಬರುತ್ತಾರೆ. ಈ ಸವಾರರು ಮತ್ತು ಕಾನ, ಬಾಳ, ಕೃಷ್ಣಾಪುರ ಕಡೆಯಿಂದ ಬರುವವರು ಒಮ್ಮೆಲೇ ಮುಖಾಮುಖಿಯಾಗುತ್ತಾರೆ. ಅಲ್ಲಿಂದ ಯಾವ ಕಡೆಗೆ ಹೋಗಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ.

ಮುಕ್ಕ ಜಂಕ್ಷನ್ ಅಪಾಯದ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿ ಎರಡೂ ಬದಿಯಿಂದ ವಾಹನ ಬರುತ್ತವೆ. ಅಲ್ಲೇ ಇರುವ ಪೆಟ್ರೋಲ್ ಬಂಕ್‌ಗೆ ತೆರಳುವ ವಾಹನ ತಿರುವು ತೆಗೆದುಕೊಳ್ಳುವಾಗ ಮುಂಭಾಗ ಅಥವಾ ಹಿಂಭಾಗದಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿಯಾಗುತ್ತವೆ. 

ಬ್ರಹ್ಮರಕೊಟ್ಲು ಎಂಬ ಸಂಕಷ್ಟ ತಾಣ: ಮಂಗಳೂರು– ಬೆಂಗಳೂರು ಹೆದ್ದಾರಿಯಲ್ಲಿ ಮೊದಲ ಸರ್ವಿಸ್ ರಸ್ತೆ ಸಿಗುವುದು ರಾಮಲ್‌ಕಟ್ಟೆಯಲ್ಲಿ. ಅಲ್ಲಿಂದ ತಲಪಾಡಿ ಜುಮಾ ಮಸೀದಿ ವರೆಗೆ ಮಾತ್ರ ಮುಂದುವರಿಯುತ್ತದೆ. ಆದರೆ ಅರ್ಧ ಕಿಲೊಮೀಟರ್‌ ಅಂತರದ ಆ ದಾರಿ ಸಂಕಷ್ಟದಿಂದ ಕೂಡಿದೆ. ಬ್ರಹ್ಮರಕೊಟ್ಲು ಟೋಲ್ ಗೇಟ್ ಬಳಿಯಂತೂ ಕಲ್ಲು ಹೊಂಡಗಳು ಬಿದ್ದು ಬಂಡೆಯ ಆಕಾರದ ಕಲ್ಲುಗಳು ಎದ್ದು ನಿಂತು ರಕ್ಕಸ ತಾಣದಂತೆ ಗೋಚರಿಸುತ್ತಿದೆ.

‘ಈ ಸರ್ವಿಸ್ ರಸ್ತೆಯ ಸಂಕಷ್ಟ ಆರಂಭಗೊಂಡು ವರ್ಷಗಳೇ ಕಳೆದಿವೆ. ಅನೇಕ ಬಾರಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೂ ಪರಿಹಾರ ಆಗಲಿಲ್ಲ. ಸರ್ವಿಸ್ ರಸ್ತೆಯ ಮೂಲಕ ಹೋಗಬೇಕೆಂದರೆ ಪ್ರಾಣ ಹಿಂಡಿದಂತಾಗುತ್ತದೆ’ ಎಂದು ಬ್ರಹ್ಮರಕೊಟ್ಲು ನಿಲ್ದಾಣದ ಆಟೊ ಚಾಲಕರೊಬ್ಬರು ಹೇಳಿದರು.

‘ಸರ್ವಿಸ್ ರಸ್ತೆಯನ್ನು ಹಾಳುಮಾಡುವುದೊಂದು ದೊಡ್ಡ ಲಾಬಿ. ಹೆದ್ದಾರಿಯನ್ನು ಬಳಸದೆ ಕೆಳಭಾಗದಿಂದ ಹೋಗುವುದನ್ನು ತಡೆಯಲು ರಾತ್ರೋರಾತ್ರಿ ಇಲ್ಲಿ ರಸ್ತೆ ಅಗೆಯಲಾಗುತ್ತದೆ. ಕಲ್ಲುಗಳು ಎದ್ದು ನಿಲ್ಲುವಂತೆ ಮಾಡಲಾಗುತ್ತದೆ. ಕೆಲವು ಕಾರು ಚಾಲಕರು ಕಲ್ಲುಗಳ ಮಧ್ಯೆ ದಾರಿಮಾಡಿಕೊಂಡು ಹೋಗುವುದು ನೋಡುತ್ತಿದ್ದರೆ ಬೇಸರ ಆಗುತ್ತದೆ. ಇಲ್ಲಿನ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕೆಲವು ಹೋರಾಟಗಳನ್ನು ಮಾಡಿದ್ದೇವೆ. ಯಾವುದೂ ಪ್ರಯೋಜನ ಆಗಲಿಲ್ಲ. ಎಲ್ಲರಿಗೂ ಮಾಮೂಲು ಸಂದಾಯ ಆಗುವಾಗ ನಮ್ಮ ಹೋರಾಟಕ್ಕೆ ಎಲ್ಲಿಂದ ಬೆಲೆ’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದವರಲ್ಲಿ ಒಬ್ಬರಾಗಿರುವ ಮುಖಂಡರು ಪ್ರಶ್ನಿಸಿದರು.

ಸರ್ವಿಸ್‌ ರಸ್ತೆಯ ದುಸ್ಥಿತಿ –ಪ್ರಜಾವಾಣಿ ಚಿತ್ರ /ಫಕ್ರುದ್ದೀನ್ ಎಚ್

ರಾಮಲ್‌ಕಟ್ಟೆಯಿಂದ ಬ್ರಹ್ಮರಕೊಟ್ಲುವರೆಗೂ ಅಲ್ಲಿಂದ ಮಸೀದಿ ವರೆಗೂ ಸರ್ವಿಸ್ ರಸ್ತೆಯಲ್ಲಿ ಭಾರಿ ಹೊಂಡಗಳು ಉಂಟಾಗಿವೆ. ಒಂದೆರಡು ಕಡೆ ಕೆಲವರು ಮಣ್ಣು ಸುರಿದಿದ್ದರೂ ವಾಹನಗಳನ್ನು ಸರಾಗವಾಗಿ ಚಲಾಯಿಸಿಕೊಂಡು ಹೋಗುವುದು ಇಲ್ಲಿ ಸವಾಲಾಗಿಯೇ ಉಳಿದಿದೆ. 

ಒಂದು ರಸ್ತೆ; ಎರಡು ದಾರಿ:
ನಂತೂರಿನಿಂದ ಕೊಟ್ಟಾರ ಕಡೆಗೆ ಸಾಗುವ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಆರಂಭವಾಗುವುದೇ ಎ.ಜೆ. ಆಸ್ಪತ್ರೆ ಮುಂಭಾಗದಿಂದ. ಇಲ್ಲಿ ಮುಖ್ಯರಸ್ತೆಯಿಂದ ಸರ್ವಿಸ್ ರಸ್ತೆಗೆ ಸೇರಲು ಎರಡು ದಾರಿಗಳಿವೆ. ಒಂದು ದಾರಿ ಕೆಎಸ್‌ಆರ್‌ಟಿಸಿ ಡಿಪೊ ಎದುರು ತೆರೆದಿದೆ. 50 ಮೀಟರ್ ಅಂತರದಲ್ಲಿ ಮತ್ತೊಂದು ದಾರಿ ಇದೆ. ಮೊದಲ ದಾರಿಯ ಮೂಲಕ ಪ್ರವೇಶಿಸಿಸುವ ವಾಹನಗಳಿಗೆ ಎರಡನೇ ದಾರಿಯ ಮೂಲಕ ಪ್ರವೇಶಿಸುವ ವಾಹನಗಳು ಡಿಕ್ಕಿಯಾಗುವ ಅಪಾಯ ಕಾಡುತ್ತದೆ.
ಬ್ರಹ್ಮರಕೊಟ್ಲು ಟೋಲ್‌ ಗೇಟ್ ಬಳಿ ಹೆದ್ದಾರಿಯನ್ನು ಸೇರುವ ಜಾಗದಲ್ಲಿ ಸರ್ವಿಸ್ ರಸ್ತೆಯ ಪರಿಸ್ಥಿತಿ
ಹೆದ್ದಾರಿಗಳ ಬದಿಯಲ್ಲಿ ಅಗತ್ಯ ಇರುವ ಕಡೆ ಸರ್ವಿಸ್ ರಸ್ತೆ ಮಾಡಬೇಕು ನಿಜ. ಆದರೆ ಎಲ್ಲ ಕಡೆ ಭೂಮಿ ಸಿಗುವುದಿಲ್ಲ. ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಎಷ್ಟೋ ಕಡೆಗಳಲ್ಲಿ ಸರ್ವಿಸ್ ರಸ್ತೆ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಹೊಸ ನೀತಿ ಜಾರಿಗೊಂಡು ಕಾರ್ಯಯೋಜನೆಗಳು ಕಾರ್ಯಗತಗೊಂಡರೆ ಸರ್ವಿಸ್ ರಸ್ತೆಗಳ ಪಾಡು ಇಲ್ಲದಂತೆ ಮಾಡಬಹುದು.
–ಜಾವೇದ್ ಅಜ್ಮಿ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.