ADVERTISEMENT

ಆರೋಗ್ಯ ಕೇಂದ್ರಕ್ಕೆ ಬಾಲಗ್ರಹ ಪೀಡೆ!

ನಿರ್ಮಾಣಗೊಂಡು ವರ್ಷ ಕಳೆದರೂ ಬಾಗಿಲು ತೆರೆದಿಲ್ಲ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 4:36 IST
Last Updated 22 ನವೆಂಬರ್ 2020, 4:36 IST
ಬೀಗ ಹಾಕಿದ ಸ್ಥಿತಿಯಲ್ಲಿರುವ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ
ಬೀಗ ಹಾಕಿದ ಸ್ಥಿತಿಯಲ್ಲಿರುವ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ   

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಸುಣ್ಣದ ಗೂಡಿನ ಬಳಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಗೊಂಡು ಒಂದು ವರ್ಷವೇ ಕಳೆದಿದೆ. ಆದರೆ ಇದರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.

ಬೀಗ ಹಾಕಿದ ಸ್ಥಿತಿಯಲ್ಲಿರುವ ಹೊಸ ಕಟ್ಟಡದ ಸುತ್ತ ಕಳೆಗಿಡಗಳು, ಪೊದೆಗಳು ಬೆಳೆದು ನಿಂತಿವೆ. ಆರು ಹಾಸಿಗೆ ಸಾಮರ್ಥ್ಯದ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಕೊಠಡಿಗಳಿವೆ. ವೈದ್ಯರ ಕೊಠಡಿ, ಕಾರ್ಯಾಲಯ, ಪ್ರಯೋಗಾಲಯ, ಪರೀಕ್ಷಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಔಷಧಿ ವಿತರಣಾ ವಿಭಾಗಕ್ಕೆ ಸ್ಥಳಾವಕಾಶ ಇಡಲಾಗಿದೆ. ಗುತ್ತಿಗೆದಾರರು ಕಟ್ಟಡವನ್ನು ಇನ್ನೂ ಹಸ್ತಾಂತರಿಸದ ಕಾರಣ ಉದ್ಘಾಟನೆಯಾಗಿಲ್ಲ. ಬಿಲ್ ಪಾವತಿ ಬಾಕಿ ಇರುವ ಕಾರಣ, ಮುಕ್ತಾಯ ಹಂತದಲ್ಲಿದ್ದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಈ ಆರೋಗ್ಯ ಕೇಂದ್ರ ಉದ್ಘಾಟನೆಯಾಗದ ಕಾರಣ, ಚಿಬಿದ್ರೆ, ಚಾರ್ಮಾಡಿ ಹಾಗೂ ತೋಟತ್ತಾಡಿ ಗ್ರಾಮಗಳ ನಿವಾಸಿಗಳು ಮುಂಡಾಜೆ ಅಥವಾ ನೆರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಯಾವುದೇ ಅಪಘಾತ ಸಂಭವಿಸಿದರೆ
30 ಕಿ.ಮೀ ದೂರ ಇರುವ ಉಜಿರೆ ಅಥವಾ ಬೆಳ್ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ನೂತನ ಆರೋಗ್ಯ ಕೇಂದ್ರಕ್ಕೆ ಆದಷ್ಟು ಬೇಗ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ಒದಗಿಸಬೇಕು. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.