ADVERTISEMENT

ಭಾರಿ ಮಳೆ ಮುನ್ಸೂಚನೆ: ದಕ್ಷಿಣ ಕನ್ನಡಕ್ಕೆ ‘ರೆಡ್‌ ಅಲರ್ಟ್‌’

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:02 IST
Last Updated 21 ಮೇ 2025, 16:02 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಆರುದಿನಗಳ ಕಾಲ  ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಗುರುವಾರ ರೆಡ್‌ ಅಲರ್ಟ್‌ ಹಾಗೂ ಮುಂದಿನ ಐದು ದಿನಗಳವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಸುರಿದ ಮಳೆಗೆ ಎರಡು ಮಂಗಲೂರು ಮತ್ತು ಬಂಟ್ವಾಳ ತಾಲ್ಲೂಕಿನಲ್ಲಿ ತಲಾ ಒಂದು ಮನೆ ಸಂಪೂರ್ಣ ಹಾಗೂ ಮಂಗಳೂರು ತಾಲ್ಲೂಕಿನಲ್ಲಿ 3 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 60 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂದು ವಿದ್ಯುತ್ ಪರಿವರ್ತಕ ಕೆಟ್ಟುಹೋಗಿದೆ. ತುರ್ತಉ ಸ್ಪಂದನೆಗಾಗಿ ಎಸ್‌ಡಿಆರ್‌ಎಫ್‌ನ 25 ತಂಡಗಳು ಹಾಗೂ 26ದೋಣಿಗಳು ಸನ್ನದ್ಧವಾಗಿವೆ. 

ಜಲಾಶಯಗಳು ಭರ್ತಿ: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 6.18 ಸೆಂ.ಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ನೇತ್ರಾವತಿ ನದಿಗೆ ಕಟ್ಟಿರುವ ಅಣೆಕಟ್ಟುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಎಎಂಆರ್‌, ತುಂಬೆ, ಬಿಳಿಯೂರು ಜಲಾಶಯಗಳು ಭರ್ತಿಯಾಗಿವೆ. 2 ಮೀ ಎತ್ತರದವರೆಗೆ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಹರೇಕಳ ಅಡ್ಯಾರ್ ಅಣೆಕಟ್ಟೆಯ ಜಲಾಶಯದಲ್ಲಿ 1 ಮೀ ಎತ್ತರದರವರೆಗೆ ನೀರು ಸಂಗ್ರಹವಿದೆ.  5.5 ಮೀವರೆಗೆ ನೀರು ಸಂಗ್ರಹ ಸಾಮರ್ಥ್ಯವಿರುವ  ಜಕ್ರಿಬೆಟ್ಟು ಅಣೆಕಟ್ಟೆಯ ಜಲಾಶಯದಲ್ಲಿ 3.50 ಮೀ.ವರೆಗೆ ನೀರು ಸಂಗ್ರಹವಿದೆ.   

ADVERTISEMENT

ಫಲ್ಗುಣಿ ನದಿಯ ಅಣೆಕಟ್ಟ್ಟೆಗಳಲ್ಲಿ 2.5 ಮೀ ವರೆಗೆ ನೀರು ಸಂಗ್ರಹ ಸಾಮರ್ಥ್ಯವಿರುವ  ಮಳವೂರು  ಜಲಾಶಯದಲ್ಲಿ 2 ಮೀ ಎತ್ತರದವರೆಗೆ ನೀರು ಸಂಗ್ರಹವಿದೆ. 4.5 ಮೀ ಎತ್ತರದವರೆಗೆ ನೀರು ಸಂಗ್ರಹ ಸಾಮರ್ಥ್ಯವಿರುವ ಇರುವೈಲು ಅಣೆಕಟ್ಟೆಯ ಜಲಾಶಯದಲ್ಲಿ 0.2 ಮೀ ಎತ್ತರದವರೆಗೆ ನೀರು ಸಂಗ್ರಹವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.