ADVERTISEMENT

ಪುತ್ತೂರು ವ್ಯಾಪ್ತಿಯಲ್ಲಿ ಮಳೆ: 2 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಮೇ 2024, 3:17 IST
Last Updated 13 ಮೇ 2024, 3:17 IST
ಭಾನುವಾರ ಸಂಜೆ ಮಳೆಯೊಂದಿಗೆ ಬೀಸಿದ ಗಾಳಿಗೆ ಹಾನಿಯಾದ ಪುತ್ತೂರು ನಗರ ವ್ಯಾಪ್ತಿಯ ಸಿಂಗಾಣಿ ಮತ್ತು ಉರ್ಲಾಂಡಿಯ ಮನೆಗಳಿಗೆ ಶಾಸಕ ಅಶೋಕ್‌ಕುಮಾರ್‌ ರೈ ಭೇಟಿ ನೀಡಿ ಪರಿಶೀಲಿಸಿದರು
ಭಾನುವಾರ ಸಂಜೆ ಮಳೆಯೊಂದಿಗೆ ಬೀಸಿದ ಗಾಳಿಗೆ ಹಾನಿಯಾದ ಪುತ್ತೂರು ನಗರ ವ್ಯಾಪ್ತಿಯ ಸಿಂಗಾಣಿ ಮತ್ತು ಉರ್ಲಾಂಡಿಯ ಮನೆಗಳಿಗೆ ಶಾಸಕ ಅಶೋಕ್‌ಕುಮಾರ್‌ ರೈ ಭೇಟಿ ನೀಡಿ ಪರಿಶೀಲಿಸಿದರು   

ಪುತ್ತೂರು: ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಗುಡುಗು, ಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಭಾನುವಾರ ಸಂಜೆ 5 ಗಂಟೆ ವೇಳೆಗೆ ಗಾಳಿ, ಗುಡುಗಿನೊಂದಿಗೆ ಸುರಿಯಲಾರಂಭಿಸಿದ ಮಳೆ ಸುಮಾರು 1 ಗಂಟೆಗೂ ಅಧಿಕ ಕಾಲ ಸುರಿದಿದೆ.

ಗ್ರಾಮಾಂತರ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಕೆಲವೊಂದು ಪ್ರದೇಶದಲ್ಲಿ ಅಡಿಕೆ ತೋಟಗಳು ನೀರಿಲ್ಲದೆ ಕರಟಿ ಹೋಗಿದ್ದವು. ಶನಿವಾರ ಸಂಜೆಯೂ ಪುತ್ತೂರು ವ್ಯಾಪ್ತಿಯಲ್ಲಿ ಮಳೆಯಾಗಿತ್ತು. ಸತತವಾಗಿ ಸುರಿದ ಮಳೆಯಿಂದಾಗಿ ಕೃಷಿಕರು ನಿಟ್ಟುಸಿರು ಬಿಡುವಂತಾಗಿದೆ.

ನಗರದ ಉರ್ಲಾಂಡಿಯಲ್ಲಿ ಮನೆ ಮೇಲೆ ಮರ ಮುರಿದು ಬಿದ್ದಿದೆ. ಸಿಂಗಾಣಿ ಎಂಬಲ್ಲಿ ಮನೆಯ ಶೀಟುಗಳು ಹಾರಿಹೋಗಿವೆ.

ADVERTISEMENT

ಉರ್ಲಾಂಡಿ ನಿವಾಸಿ ಶೋಭಾ ಹೆಗ್ಡೆ ಎಂಬುವರ ಮನೆ ಮೇಲೆ ಮರ ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಬಪ್ಪಳಿಗೆ ಸಮೀಪದ ಸಿಂಗಾಣಿಯ ಕಮಲ ಅವರ ಮನೆಯ ಮಾಡಿನ ಶೀಟ್‌ಗಳು ಹಾರಿಹೋಗಿವೆ.

ಶಾಸಕ ಅಶೋಕ್‌ಕುಮಾರ್‌ ರೈ ಅವರು ಸಿಂಗಾಣಿಯ ಕಮಲ ಅವರ ಮನೆಗೆ ಭೇಟಿ ನೀಡಿ, ಅವರ ಮನೆಗೆ ಟಾರ್ಪಾಲ್‌ ಅಳವಡಿಸುವ ಮೂಲಕ ವಾಸ್ತವ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಮನೆಯ ಮೇಲೆ ಮರ ಉರುಳಿಬಿದ್ದು ಹಾನಿ ಸಂಭವಿಸಿದ ಉರ್ಲಾಂಡಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮನೆಯ ಮೇಲೆ ಬಿದ್ದಿರುವ ಮರವನ್ನು ತಕ್ಷಣ ತೆರವುಗೊಳಿಸುವಂತೆ ಸೂಚನೆ ನೀಡಿದರು. ಎರಡೂ ಮನೆಯವರಿಗೂ ತಾತ್ಕಾಲಿಕ ವ್ಯವಸ್ಥೆಗಾಗಿ ನೆರವಿನ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರಾದ ದಿನೇಶ್ ಪಿ.ವಿ., ಮೋನು ಬಪ್ಪಳಿಗೆ, ಕೇಶವ ಉರ್ಲಾಂಡಿ, ಇಸ್ಮಾಯಿಲ್ ಬೊಳುವಾರು, ಕುಮಾರ್ ಉರ್ಲಾಂಡಿ, ಸೂರ್ಯ, ವಿಲ್ಫ್ರೆಡ್ ಫರ್ನಾಂಡಿಂಸ್‌, ಶ್ರೀಕಾಂತ್, ದೀಕ್ಷಿತ್ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.