
ಮಂಗಳೂರು: ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಅಂಚೆ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆವರಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.
‘ಈ ಬೇಡಿಕೆ ಈಡೇರಿಸಲು ಕ್ರಮವಹಿಸುವಂತೆ ಒತ್ತಾಯಿಸಿ ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ ಹಾಗೂ ರಾಜ್ಯದ ಕಾನೂನು ಸಚಿವರಿಗೆ ಈ ಅಂಚೆಪತ್ರಗಳನ್ನು ಕಳುಹಿಸಲಾಗುತ್ತದೆ. ಸಹಿ ಹಾಕಿದ ಒಟ್ಟು 5000 ಅಂಚೆಪತ್ರಗಳನ್ನು ಜಿಲ್ಲೆಯಿಂದ ಕಳುಹಿಸುವ ಉದ್ದೇಶವಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ ತಿಳಿಸಿದರು.
‘6000ಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿ ಅನೇಕ ವರ್ಷಗಳಿಂದ ವಿಲೇವಾರಿಗೆ ಬಾಕಿ ಇವೆ. ಅವುಗಳಲ್ಲಿ ಶೇ 40ರಿಂದ ಶೇ 50ರಷ್ಟು ಪ್ರಕರಣಗಳು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಪ್ರದೇಶಗಳ ಜನರಿಗೆ ಸಂಬಂಧಪಟ್ಟವು. ಇಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಹಣ, ಸಮಯದ ಜೊತೆಗೆ ಜನರ ಹಾಗೂ ವಕೀಲರ ಶ್ರಮವೂ ಉಳಿಯುತ್ತದೆ. ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯವರಿಗೂ ಇದರಿಂದ ಅನುಕೂಲವಾಗುತ್ತದೆ’ ಎಂದರು.
ಅಭಿಯಾನಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್, ‘ನಗರದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬುದು ದಶಕಗಳ ಬೇಡಿಕೆ. ಈ ಪ್ರದೇಶದವರು ನ್ಯಾಯ ಬಯಸಿ ಹೈಕೋರ್ಟ್ ಮೊರೆ ಹೋದವರು ಪ್ರತಿ ವಿಚಾರಣೆಗೂ ಬೆಂಗಳೂರಿಗೆ ಪ್ರಯಾಣಿಸಬೇಕಾಗುತ್ತದೆ. ಇದಕ್ಕೆ ಸಮಯ ತಗಲುವುದು ಮಾತ್ರವಲ್ಲ, ಹೆಚ್ಚುವರಿ ವೆಚ್ಚವನ್ನೂ ಅವರು ಭರಿಸಬೇಕಾಗುತ್ತದೆ. ಹಾಗಾಗಿ ಧಾರವಾಡ, ಕಲಬುರಗಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೈಕೋರ್ಟ್ ಪೀಠವನ್ನು ಹೊಂದುವ ಅಗತ್ಯವಿದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಬೆಂಬಲ ನೀಡಿದ್ದಾರೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡೋಣ. ಈ ಅಭಿಯಾನವನ್ನು ತಾರ್ಕಿಕ ಅಂತ್ಯದವರೆಗೆ ತಲುಪಿಸಲು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ’ ಎಂದರು.
ವಕೀಲ ಮೋನಪ್ಪ ಭಂಡಾರಿ, ‘ಈ ಉದ್ದೇಶ ಈಡೇರಿಸಿಕೊಳ್ಳಲು ವಕೀಲರು, ಕಕ್ಷಿದಾರರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಹೈಕೋರ್ಟ್ ಪೀಠವನ್ನು ಹೊಂದುವ ಎಲ್ಲ ಅರ್ಹತೆ ದಕ್ಷಿಣ ಕನ್ನಡ ಜಿಲ್ಲೆಗೆ ಇದೆ. ಅದನ್ನು ಜಾರಿಗೊಳಿಸಲು ಯಾವುದೇ ಅಡ್ಡಿ ಇಲ್ಲ’ ಎಂದರು.
ಸಮಿತಿ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಶ್ರೀಧರ್, ಜಂಟಿ ಕಾರ್ಯದರ್ಶಿ ಜ್ಯೋತಿ, ವಕೀಲ ಇಬ್ರಾಹಿಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.