ADVERTISEMENT

ರಾಜ್ಯದಲ್ಲಿ ಕೋವಿಡ್‌ ಸವಾಲು ಸಮರ್ಥ ನಿರ್ವಹಣೆ: ನಳಿನ್‌ಕುಮಾರ್‌ ಕಟೀಲ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 13:21 IST
Last Updated 25 ಜುಲೈ 2020, 13:21 IST
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು. ಪ್ರಜಾವಾಣಿ ಚಿತ್ರ
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್‌ ಮಾತನಾಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಬರ, ಪ್ರವಾಹ ಸಮಸ್ಯೆಗಳು ಎದುರಾಗಿದ್ದವು. ಇದೀಗ ಕೋವಿಡ್‌ ಸವಾಲನ್ನು ಸಮರ್ಥವಾಗಿ ಎದುರಿಸುತ್ತಾ ಸರ್ಕಾರ ಒಂದು ವರ್ಷವನ್ನು ಪೂರೈಸುತ್ತಿದೆ. ಕೋವಿಡ್‌–19 ನಿಯಂತ್ರಣದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಹೇಳಿದರು.

ರಾಜ್ಯದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಗಸ್ಟ್‌ 15ರೊಳಗೆ ಹೈ ಫ್ಲೋ ಅಕ್ಸಿಜನ್ ಸೌಲಭ್ಯ ಒದಗಿಸಲಾಗುವುದು ಎಂದರು.

ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ವೃದ್ಧರು ಹಾಗೂ ಮಕ್ಕಳನ್ನು ಗುರುತಿಸಿ, ಮುನ್ನೆಚ್ಚರಿಕೆ ನೀಡಲು ರಾಜ್ಯದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಇಂತಹ ಸಮೀಕ್ಷೆ ನಡೆಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು.

ADVERTISEMENT

ಅಶಕ್ತರಿಗೆ ಪರಿಹಾರ: ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ₹2,272 ಕೋಟಿ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರು, ಹೂ- ಹಣ್ಣು ತರಕಾರಿ ಬೆಳೆದ ರೈತರು, ನೇಕಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು ಮತ್ತು ಚರ್ಮ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಪರಿಹಾರ ಒದಗಿಸಿದೆ ಎಂದು ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಪ್ರವಾಹ, ಕೋವಿಡ್ ನಡುವೆಯೂ ರಾಜ್ಯದ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಆದ್ಯತೆ ನೀಡಲಾಗಿದ್ದು, ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, 40ಕ್ಕೂ ಹೆಚ್ಚು ಜಾಗತಿಕ ಕಂಪನಿಗಳು ಹೂಡಿಕೆ ಮಾಡಲು ಮನವೊಲಿಸಿದ್ದಾರೆ ಎಂದು ತಿಳಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲ ಕಲ್ಪಿಸಲು ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ರೈತರ ಶೋಷಣೆ ತಪ್ಪಲಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಸುದರ್ಶನ್ ಇದ್ದರು.

‘ಕಾಂಗ್ರೆಸ್ಸಿಗರಿಗೆ ಟೀಕೆ ಅನಿವಾರ್ಯ’

ಕೋವಿಡ್‌–19 ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಫಲ ಆಗಿರುವುದು, ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತಿರುವುದನ್ನು ನೋಡಿ ಕಾಂಗ್ರೆಸ್‌ನವರು ಅನಿವಾರ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದರು.

ಮರಣದ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸೌಲಭ್ಯಗಳು, ಆಸ್ಪತ್ರೆಗಳಿದ್ದು, ಹೊರ ರಾಜ್ಯ ಹಾಗೂ ಜಿಲ್ಲೆಗಳ ಜನರು ಕೊನೆ ಹಂತದ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ. ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ಕೊನೆ ಹಂತದಲ್ಲಿ ಕೋವಿಡ್–19 ಸೋಂಕು ಬಾಧಿಸಿರುವುದರಿಂದ ಸಾವಿನ ಪ್ರಮಾಣ ಹೆಚ್ಚಾದಂತೆ ಕಂಡು ಬರುತ್ತಿದೆ ಎಂದು ಹೇಳಿದರು.

ಜಾಮೀನು ಪಡೆಯುವ ಸ್ಥಿತಿ ಏಕೆ ಬಂತು?

ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆರೋಪದ ಕುರಿತಂತೆ ಈಗಾಗಲೇ ಐದು ಮಂದಿ ಸಚಿವರು ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಏಕೆ ಅಗತ್ಯವಿಲ್ಲದೆ ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದೆ ಎಂಬ ಉತ್ತರ ನೀಡಲಿ ಎಂದು ನಳಿನ್‌ಕುಮಾರ್ ಕಟೀಲ್‌ ಸವಾಲು ಹಾಕಿದರು.

ಕಾಂಗ್ರೆಸ್ಸಿಗರಿಗೆ ಎಲ್ಲರೂ ಭ್ರಷ್ಟಾಚಾರಿಗಳಂತೆ ಕಾಣುತ್ತಾರೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಈಗಿನ ರಾಜ್ಯ ಘಟಕದ ಅಧ್ಯಕ್ಷರು ಜಾಮೀನು ಪಡೆದು ಹೊರಗಿದ್ದಾರೆ. ಅವರೆಲ್ಲ ಜಾಮೀನು ಪಡೆಯುವ ಸ್ಥಿತಿ ಏಕೆ ಬಂತು ಎಂಬುದು ಜನರಿಗೆ ತಿಳಿದಿದೆ ಎಂದರು.

***

ಲಾಕ್‌ಡೌನ್‌ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

-ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ

***

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ರೈತರ ಪರವಾಗಿದೆ. ರೈತರು ವಿರೋಧಿಸುತ್ತಿಲ್ಲ. ರಾಜಕಾರಣ ಮಾಡುವ ರಾಜಕಾರಣಿಗಳು ಮಾತ್ರ ವಿರೋಧಿಸುತ್ತಿದ್ದಾರೆ.

-ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.