ADVERTISEMENT

ಹೆದ್ದಾರಿಗಳ ಸುಧಾರಣೆ: ಮುಂದಿನ ವಾರ ಸಭೆ–ಸಿಎಂ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 7:39 IST
Last Updated 19 ನವೆಂಬರ್ 2022, 7:39 IST
ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಅವರ ಪ್ರತಿಮೆ ಅನಾವರಣದ ನಂತರ ಬಹಿರಂಗ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು
ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಅವರ ಪ್ರತಿಮೆ ಅನಾವರಣದ ನಂತರ ಬಹಿರಂಗ ಸಭೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು   

ಮಂಗಳೂರು: ಮಂಗಳೂರು–ಬೆಂಗಳೂರು ಹೆದ್ದಾರಿ ಸೇರಿದಂತೆ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ವಿಷಯವಾಗಿ ಮುಂದಿನ ವಾರ ಅಧಿಕಾರಿಗಳ ಸಭೆ ನಡೆಸಲಿದ್ದು, ದೆಹಲಿಗೆ ಹೋದಾಗ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಿಪೇರಿ ಮಳೆ ಕಾರಣಕ್ಕೆ ವಿಳಂಬವಾಗಿದೆ. ಶಿರಾಡಿ ಘಾಟಿ ರಸ್ತೆಯ ಅಭಿವೃದ್ಧಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅಧಿಕಾರಿಗಳ ಸಭೆಯಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸುತ್ತೇವೆ‘ ಎಂದು ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಕರಾವಳಿಯಲ್ಲಿ ಹೂಡಿಕೆ: ಬಂಡವಾಳ ಹೂಡಿಕೆದಾರರ ಸಮಾವೇಶದಿಂದಾಗಿ ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯಾ ಉತ್ಪಾದನೆಗೆ ಒಂದೂವರೆಯಿಂದ ಎರಡು ಲಕ್ಷ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ದೊಡ್ಡ ಪ್ರಮಾಣದ ಹೂಡಿಕೆ ಕರ್ನಾಟಕದ ಕರಾವಳಿ ಭಾಗದಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ADVERTISEMENT

ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ತಯಾರಿ ನಡೆದಿದೆ. ಮಾರ್ಚ್– ಏಪ್ರಿಲ್ ವೇಳೆಗೆ ಇಲ್ಲಿ ಉದ್ಯಮ ಸ್ಥಾಪಿಸುವ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ಹೇಳಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬರಲಿದ್ದು, ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ತಲೆ ಎತ್ತಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಘಟಕ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕಕ್ಕೆ ಅಗತ್ಯ ವಿರುವ ಇಂಧವನ್ನೂ ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಮತ್ತು ಪವನ ಮಿಲ್‌ಗಳಿಂದಲೇ ಪಡೆಯಲಾಗುವುದು. ಇದು ಸಂಪೂರ್ಣವಾಗಿ ಹಸಿರು ಯೋಜನೆಯಾಗಲಿದೆ ಎಂದರು.

ಉದ್ಯೋಗ ಸೃಜನೆ:‌ ನೇರ ಹಾಗೂ ಪರೋಕ್ಷವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಯಾಗಿ ಈ ಭಾಗದ ಯುವಕರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.