ADVERTISEMENT

ಹಲಾಲ್‌ ಪ್ರಮಾಣಪತ್ರಕ್ಕೆ ಹಿಂದೂ ಜನಜಾಗೃತಿ ಸಮಿತಿ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 16:32 IST
Last Updated 1 ಅಕ್ಟೋಬರ್ 2022, 16:32 IST

ಮಂಗಳೂರು: ಸರ್ಕಾರದ ಅಧೀನದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ) ಮತ್ತು ಭಾರತೀಯ ಗುಣಮಟ್ಟ ಬ್ಯೂರೊದಂತಹ (ಬಿಐಎಸ್‌) ಸರ್ಕಾರಿ ಏಜೆನ್ಸಿಗಳಿಂದ ಪ್ರಮಾಣೀಕೃತಗೊಂಡ ಬಳಿಕವೂ ಕೆಲವು ಉತ್ಪನ್ನಗಳಿಗೆ ಹಲಾಲ್‌ ಪ್ರಮಾಣಪತ್ರ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್‌ ಶಿಂಧೆ, ‘ಈ ಹಿಂದೆ ಹಲಾಲ್‌ ಪ್ರಮಾಣಪತ್ರ ಮಾಂಸಕ್ಕೆ ಸೀಮಿತವಾಗಿತ್ತು. ಅದನ್ನೀಗ ಸೌಂದರ್ಯ ವರ್ಧಕಗಳು, ಫ್ಯಾಷನ್‌ ಉತ್ಪನ್ನಗಳು, ಆಹಾರ ಉತ್ಪನ್ನಗಳಷ್ಟೇ ಅಲ್ಲ, ವಸತಿ ಸಮುಚ್ಚಯಗಳಿಗೂ ವಿಸ್ತರಿಸಲಾಗಿದೆ. ಈ ಪ್ರಮಾಣಪತ್ರ ಪಡೆಯಲು ಜಮಿತಾ ಉಲೇಮಾ ಹಿಂದ್‌ ಸಂಸ್ಥೆಗೆ ಶುಲ್ಕ ಪಾವತಿಸಬೇಕು. ಈ ಸಂಸ್ಥೆಯ ಹಣಕಾಸು ವ್ಯವಹಾರಗಳನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘57 ಮುಸ್ಲಿಂ ರಾಷ್ಟ್ರಗಳು ಹಲಾಲ್‌ ಪ್ರಮಾಣಪತ್ರ ಇರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಮಾತ್ರ ಅವಕಾಶ ನೀಡುತ್ತಿವೆ. ಹಾಗಾಗಿ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಇತರ ಉತ್ಪಾದಕರೂ ಹಲಾಲ್‌ ಪ್ರಮಾಣಪತ್ರದ ಹಿಂದೆ ಬಿದ್ದಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಮಳಿಗೆಗಳಲ್ಲಿ ಹಲಾಲ್‌ ಪ್ರಮಾಣಪತ್ರ ಹೊಂದಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಈ ಪ್ರಮಾಣೀಕರಣ ವ್ಯವಸ್ಥೆಯಿಂದ ಖಾಸಗಿ ಏಜೆನ್ಸಿ ಕೋಟಿಗಟ್ಟಲೆ ರೂಪಾಯಿ ಸಂಗ್ರಹಿಸುತ್ತಿದ್ದರೂ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಯಾ ಪೈಸೆಯೂ ಸೇರುತ್ತಿಲ್ಲ’ ಎಂದರು.

ADVERTISEMENT

‘ಮುಂಬೈನಲ್ಲಿ ಅ.9ರಂದು ಹಲಾಳ್‌ ವಿರೋಧಿ ಸಮಾವೇಶ ಆಯೋಜಿಸಲಾಗಿದೆ. ಹಲಾಲ್ ವಿರೋಧಿಸುವ ವಿವಿಧ ಧರ್ಮಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಜಂಟಿ ಸಂಚಾಲಕ ದಿನೇಶ್‌ ಕುಮಾರ್‌ ಜೈನ್‌, ‘ಭಾರತ ಜಾತ್ಯತೀತ ರಾಷ್ಟ್ರ. ಒಂದು ಧರ್ಮಕ್ಕೆ ಸೀಮಿತವಾದ ಹಲಾಲ್‌ ವ್ಯವಸ್ಥೆಯನ್ನು ಇತರ ಧರ್ಮಗಳ ಮೇಲೂ ಹೇರುವ ಅವಶ್ಯಕತೆ ಏನಿದೆ. ಸರ್ಕಾರ ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಇಂದು ಉಪನ್ಯಾಸ:

ಹಲಾಲ್‌ ಆರ್ಥಿಕತೆಯ ಬಗ್ಗೆ ನಗರದ ಬಾಳಂಭಟ್ಟ ಸಭಾಂಗಣದಲ್ಲಿ ಇದೇ ಭಾನುವಾರ (ಅ. 2) ಮಧ್ಯಾಹ್ನ 2ರಿಂದ ಉಪನ್ಯಾಸ ಏರ್ಪಡಿಸಲಾಗಿದೆ.

ಹಲಾಲ್‌ ವಿರೋಧಿ ಸಮಿತಿ ಶೀಘ್ರ:

‘ಧರ್ಮ ಆಧರಿತ ಪರ್ಯಾಯ ಆರ್ಥಿಕತೆಯನ್ನು ಹೊಂದುವುದು ದೇಶದ ಭದ್ರತೆಗೆಅಪಾಯಕಾರಿ. ಹಲಾಲ್‌ ಆರ್ಥಿಕತೆಯನ್ನು ನಿಲ್ಲಿಸಲು ಹಲಾಲ್‌ ವಿರೋಧಿ ಹೋರಾಟ ಸಮಿತಿಗಳನ್ನು ರಾಜ್ಯದಾದ್ಯಂತ ಆರಂಭಿಸಲಾಗುತ್ತದೆ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಂಚಾಲಕ ಚಂದ್ರ ಮೊಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.