ಪುತ್ತೂರು: ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯ ಮೂಲಕ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ಕಾನೂನು ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿ, ಸರ್ಕಾರದ ಧೋರಣೆ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪುತ್ತೂರು ನಗರದ ದರ್ಬೆ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಯಿತು.
ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಕೊಡಗು ಮಾತನಾಡಿ, ಹಿಂದೂ ಕಾರ್ಯಕರ್ತರು ಯಾವುದೇ ಕಾರ್ಯಕ್ರಮಗಳಿಗೆ ಹೋಗದಂತೆ ರಾಜ್ಯ ಸರ್ಕಾರ ಅಡ್ಡಿ ಪಡಿಸುತ್ತಿದೆ. ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇಸ್ಲಾಮಿಕ್ ಮತ ಬ್ಯಾಂಕ್‌ಆಗಿ ರಾಜಕಾರಣ ಮಾಡುತ್ತಿದೆ. ಸರ್ಕಾರವು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಅಧಿಕಾರ ದುರುಪಯೋಗ ಪಡಿಸುತ್ತಿದೆ. ಹಿಂದೂ ಸಮಾಜವನ್ನು ಮುಟ್ಟಲು ಬರಬೇಡಿ, ನಾವು ಯಾರ ತಂಟೆಗೂ ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ನಾವು ಯಾರಿಗೂ ಬಗ್ಗುವುದಿಲ್ಲ ಮತ್ತು ಜಗ್ಗುವಿದಿಲ್ಲ ಎಂದರು.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಕರಾವಳಿಯ ಎಲ್ಲ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದರು.
ಹಿಂದೂ ಜಾಗರಣಾ ವೇದಿಕೆಯ ನಿಧಿ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಶ್ರೀಧರ್ ತೆಂಕಿಲ, ಹರೀಶ್ ದೋಳ್ಪಾಡಿ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ದಿನೇಶ್ ಪಂಜಿಗ, ಮನೀಶ್ ಬನ್ನೂರು, ಶಿವಪ್ರಸಾದ್, ಕೀರ್ತನ್ ಸವಣೂರು, ಅನುಪ್ ಆಳ್ವ ಎಣ್ಮೂರು, ದೇವಿಪ್ರಸಾದ್ ಮರ್ದಾಳ, ಲೋಕನಾಥ್ ಭಂಡಾರಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಜೀವಂಧರ್ ಜೈನ್, ರಾಜೇಶ್ ಬನ್ನೂರು, ರಾಕೇಶ್ ರೈ ಕೆಡೆಂಜಿ, ದಿನೇಶ್ ಮೆದು ಭಾಗವಹಿಸಿದ್ದರು.
ಪೊಳ್ಳು ಬೆದರಿಕೆಗೆ ಹೆದರಲ್ಲ: ‘ಜಿಲ್ಲೆಗೆ ಹೊಸ ಕಮಿಷನರ್, ಹೊಸ ಎಸ್‌ಪಿ ಬಂದಿದ್ದಾರೆ. ಇನ್ನು ನಿಮ್ಮ ಆಟ ನಡೆಯೋದಿಲ್ಲ ಎಂದು ಇಲ್ಲಿನ ಶಾಸಕ ಹೇಳುತ್ತಿದ್ದಾರೆ. ಯಾವುದೇ ಕಮಿಷನರ್, ಎಸ್‌ಪಿ ಬಂದಿರಬಹುದು. ನಾವು ಸಂವಿಧಾನಕ್ಕೆ, ಕಾನೂನಿಗೆ ಗೌರವ ಕೊಡುತ್ತೇವೆ. ಇಸ್ಲಾಮೀಕರಣದ ತುಷ್ಟೀಕರಣಕ್ಕಾಗಿ, ಮುಸ್ಲಿಮರ ಮತಕ್ಕಾಗಿ ನೀವು ಏನೇ ಮಾಡುತ್ತಿರಬಹುದು. ನಾವು ಕಾನೂನು ಪರವಾಗಿರುವವರು. ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂಬ ವಿಚಾರಗಳನ್ನು ಇಲ್ಲಿನ ಶಾಸಕ ತಿಳಿದುಕೊಳ್ಳಬೇಕು’ ಎಂದು ಅಜಿತ್ ಕೊಡಗು ಹೇಳಿದರು.
ಶಾಸಕರ ಬಗ್ಗೆ ಅವಹೇಳನಕಾರಿ ಪದಬಳಕೆ: ದೂರು
ಪುತ್ತೂರು: ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಡೆದ ಸಭೆಯಲ್ಲಿ ಅಜಿತ್ ಮಡಿಕೇರಿ ಎಂಬುವರು ಶಾಸಕರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಕುರಿತು ಪುತ್ತೂರು ನಗರ ಠಾಣೆಗೆ ಕಾಂಗ್ರೆಸ್ ವತಿಯಿಂದ ದೂರು ನೀಡಲಾಗಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಂಗಳವಾರ ದೂರು ನೀಡಿದ್ದಾರೆ.
ಅಜಿತ್ ಮಡಿಕೇರಿ ಎಂಬುವರು, ‘ರಾಜ್ಯದ ಮುಖ್ಯಮಂತ್ರಿ ಭಯೋತ್ಪಾದಕರಿಗೆ ಬೆಂಬಲಿಸುತ್ತಿದ್ದಾರೆ ಎಂದೂ ಶಾಸಕ ಅಶೋಕ್‌ಕುಮಾರ್ ರೈ ಅವರಿಗೆ ಅವಹೇಳನಕಾರಿ ಪದ ಬಳಸಿ ಸಾರ್ವಜನಿಕರನ್ನು ಕೆರಳಿಸುವ, ಕೋಮು ದ್ವೇಷ ಭಾಷಣ ಮಾಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನುಕ್ರಮ ಕೈಗೊಳ್ಳಬೇಕು’ ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.