ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ಬೇರೆ ವಿಮಾನ ನಿಲ್ದಾಣಗಳ ಮೂಲಕ ಜಿಲ್ಲೆಗೆ ಬಂದಿರುವ ಎಲ್ಲ ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 5,875 ಜನರನ್ನು ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಶನಿವಾರ ಹೋಂ ಕ್ವಾರಂಟೈನ್‌ನಲ್ಲಿದ್ದವರ ಸಂಖ್ಯೆ 3,032 ಇತ್ತು.
ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ, ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇದೀಗ ಮುಂಬೈ, ಬೆಂಗಳೂರು, ದೆಹಲಿ ಮುಂತಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಜಿಲ್ಲೆಗೆ ಬಂದಿರುವ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 7 ಮಂದಿಯಲ್ಲಿ ಕೋವಿಡ್–19 ಪ್ರಕರಣ ದೃಢಪಟ್ಟಿದ್ದು, ಈ ಪೈಕಿ ಒಬ್ಬರು ಭಟ್ಕಳದವರಾಗಿದ್ದರೆ, ನಾಲ್ವರು ಕಾಸರಗೋಡು ಜಿಲ್ಲೆಯವರಾಗಿದ್ದಾರೆ. 10 ತಿಂಗಳ ಮಗುವಿನಲ್ಲಿ ಕೋವಿಡ್–19 ದೃಢಪಟ್ಟಿದ್ದು, ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಳ್ತಂಗಡಿಯ ಕಲ್ಲೇರಿಗೆ ಬಂದಿದ್ದ ಯುವಕನಲ್ಲೂ ಸೋಂಕು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಬೇರೆ ವಿಮಾನ ನಿಲ್ದಾಣಗಳ ಮೂಲಕ ಜಿಲ್ಲೆಯನ್ನು ಪ್ರವೇಶಿಸಿದವರ ಮೇಲೂ ನಿಗಾ ವಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
12 ಜನರಿಗೆ ಕ್ವಾರಂಟೈನ್: ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಲ್ಲೇರಿಯ ಯುವಕನಲ್ಲಿ ಕೋವಿಡ್ -19 ದೃಢಪಟ್ಟಿದ್ದು, ಈ ಯುವಕನಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು ಸೇರಿದಂತೆ 12 ಮಂದಿಯನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಉಳಿಯುವಂತೆ ಸೂಚನೆ ನೀಡಲಾಗಿದೆ.
ಇದೇ 21 ರಂದು ದುಬೈನಿಂದ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಈ ಯುವಕ, ಅಂದು ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಮೂಲಕ 22 ರಂದು ಬೆಳಿಗ್ಗೆ ಉಪ್ಪಿನಂಗಡಿಗೆ ಬಂದಿಳಿದಿದ್ದ. ಅಲ್ಲಿಂದ ಆಟೋದಲ್ಲಿ ಕಲ್ಲೇರಿಯ ತನ್ನ ಮನೆಗೆ ತೆರಳಿದ್ದ. ನಂತರ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಿದ್ದರಿಂದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಈತನಿಗೆ ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಆರು ಆರೋಗ್ಯ ಸಹಾಯಕರು ಮತ್ತು ಐಸೊಲೇಷನ್ ವಾರ್ಡ್ ಅನ್ನು ಸ್ವಚ್ಛಗೊಳಿಸಿದ ನಾಲ್ವರು ಸಹಾಯಕರಿಗೆ ಹೋಂ ಕ್ವಾರಂಟೈನ್‌ನಲ್ಲಿ ಉಳಿಯಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.