
ಮಂಗಳೂರು: ಸಹ್ಯಾದ್ರಿ ಸಂಚಯ, ವಿದ್ಯಾಗಮ ಟ್ರಸ್ಟ್ ಆಯೋಜಿಸಿದ, ಅಳಿವಿನಂಚಿನಲ್ಲಿರುವ ಮಂಗಟ್ಟೆ (ಹಾರ್ನ್‌ಬಿಲ್) ಪಕ್ಷಿಗಳ ಕುರಿತು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಶಾಲಾ ಮಕ್ಕಳು ರಚಿಸಿದ ಚಿತ್ರ ಕಲಾಕೃತಿಗಳ ಪ್ರದರ್ಶನ ‘ಕಾನುಕುಂಜ’ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಆರಂಭಗೊಂಡಿತು.
ಪ್ರಯೋಗಶೀಲ ಶಿಕ್ಷಕ ಅರವಿಂದ ಕುಡ್ಲ ಅವರು ನಗರದ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರಿಗೆ ನೇರಳೆ ಗಿಡ ಹಸ್ತಾಂತರಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರೀಕರಣದಿಂದಾಗಿ ಮಂಗಳೂರು ನಗರದಲ್ಲಿ ಹಾರ್ನ್‌ಬಿಲ್‌ಗಳು ಕಂಡುಬರುತ್ತಿಲ್ಲ. ಆದರೆ ಹೊರಭಾಗದ ಬಂಟ್ವಾಳ, ಮೂಡುಬಿದಿರೆ ಒಳಗಿನ ಕಾಡುಗಳಲ್ಲಿ ಮಲಬಾರ್ ಗ್ರೇ ಹಾರ್ನ್‌ಬಿಲ್, ಮಲಬಾರ್ ಪೈಡ್ ಹಾರ್ನ್‌ಬಿಲ್ ಪ್ರಭೇಧಗಳು ಈಗಲೂ ಕಾಣಸಿಗುತ್ತಿವೆ. ಮಂಗಟ್ಟೆಗಳಲ್ಲೇ ವಿಶಿಷ್ಟ, ದೊಡ್ಡದಾಗಿರುವ ಗ್ರೇಟ್ ಹಾರ್ನ್‌ಬಿಲ್ ಸೀಮಿತ ಸಂಖ್ಯೆಯಲ್ಲಿ ಉತ್ತರ ಕನ್ನಡದ ಕಾಡುಗಳು, ಅರುಣಾಚಲ ಪ್ರದೇಶದಲ್ಲಿ ಕಾಣಸಿಗುತ್ತವೆ ಎಂದು ಮಾಹಿತಿ ನೀಡಿದರು.
ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ನಿರ್ದೇಶಕಿ ಭ್ರಮರಿ ಶಿವಪ್ರಕಾಶ್ ಮಾತನಾಡಿ, ಕಲೆಗಳು ಪ್ರಕೃತಿಯಿಂದ ಪ್ರೇರಿತವಾಗಿ ವಿಕಸಿತಗೊಂಡಿವೆ. ಪ್ರಕೃತಿಗೆ ಪೂರಕವಾಗಿ ಕಲೆಯ ಅಭಿವ್ಯಕ್ತಿಗೊಳ್ಳಲಿ ಎಂದು ಹೇಳಿದರು.
ಅಂಕೋಲಾ ಬೋಗ್ರಿಗದ್ದೆ ಶಾಲೆ ಶಿಕ್ಷಕಿ ಸೃಜನಾ ನಾಯಕ, ಉಳುವರೆ ಶಾಲೆಯ ಶಿಕ್ಷಕಿ ಸಂಧಾ ನಾಯ್ಕ, ಯಲ್ಲಾಪುರದ ಸಮಾಜಸೇವಕಿ ರಾಜೇಶ್ವರಿ ಸಿದ್ಧಿ ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕ, ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ, ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಅನಂತ ಪದ್ಮನಾಭ ರಾವ್ ಅಧ್ಯಕ್ಷತೆ ವಹಿಸಿದ್ದರು. ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.