ADVERTISEMENT

ಕಾರ್ಮಿಕರ ಕೊರತೆ: ಪಾರ್ಸೆಲ್‌ಗೆ ಆದ್ಯತೆ

ಇಂದಿನಿಂದ ತೆರೆಯಲಿವೆ ಹೋಟೆಲ್‌ಗಳು

ಹರ್ಷವರ್ಧನ ಪಿ.ಆರ್.
Published 7 ಜೂನ್ 2020, 15:08 IST
Last Updated 7 ಜೂನ್ 2020, 15:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಸೋಮವಾರದಿಂದ ಸರ್ವಿಸ್ ನೀಡಲು ಹೋಟೆಲ್‌ಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡರೂ, ಕಾರ್ಮಿಕರ ಕೊರತೆ ಸಮಸ್ಯೆ ಕಾಡುತ್ತಿದ್ದು, ಪಾರ್ಸೆಲ್‌ಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಸುಮಾರು 30 ಸಾವಿರಕ್ಕೂ ಅಧಿಕ ಕಾರ್ಮಿಕರು ಇದ್ದಾರೆ. ಈ ಪೈಕಿ ಶೇ 20ರಿಂದ 30ರಷ್ಟು ಮಂದಿ ಹೊರ ರಾಜ್ಯ ಹಾಗೂ ಜಿಲ್ಲೆಯ ಮಂದಿ. ಉತ್ತರ ಭಾರತ ಹಾಗೂ ಚೈನೀಸ್‌ ಮಾದರಿಯ ಆಹಾರ ಪದಾರ್ಥಗಳ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹೊರ ರಾಜ್ಯದ ಕಾರ್ಮಿಕರು ಸದ್ಯ ವಾಪಸ್‌ ಬರುವ ಲಕ್ಷಣಗಳಿಲ್ಲ. ಬಂದರೂ, 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ. ಇದರಿಂದಾಗಿ ಅವರನ್ನು ಅವಲಂಬಿಸಿದ ಹೋಟೆಲ್‌ಗಳಿಗೆ ಹಿನ್ನಡೆಯಾಗಿದೆ.

ಇನ್ನೊಂದೆಡೆ, ಕೋವಿಡ್–19 ಲಾಕ್‌ಡೌನ್ ಬಳಿಕ ಊರುಗಳಿಗೆ ವಾಪಸ್ ಆಗಿದ್ದ ಬಹುತೇಕ ಹೋಟೆಲ್ ಕಾರ್ಮಿಕರು ಮರಳಿ ನಗರಕ್ಕೆ ಬರಲು ಒಲವು ತೋರುತ್ತಿಲ್ಲ.

ADVERTISEMENT

‘ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಪರಿಣಾಮ ಹೆಚ್ಚಿನ ಹೋಟೆಲ್ ಕಾರ್ಮಿಕರು ಕೆಲಸಕ್ಕೆ ಬರಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಲಾಕ್‌ಡೌನ್‌ ಅವಧಿಯಲ್ಲಿ ಊರಿನಲ್ಲಿ ಪರ್ಯಾಯ ಕೆಲಸಗಳಿಗೆ ಹೊಂದಿಕೊಂಡಿದ್ದಾರೆ’ ಎಂದು ಹೋಟೆಲ್ ಮಾಲೀಕರೊಬ್ಬರು ತಿಳಿಸಿದರು.

‘ಹೋಟೆಲ್‌ಗಳು ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಇನ್ನೊಂದೆಡೆ ಪ್ರವಾಸಿಗರು, ಶಾಲಾ–ಕಾಲೇಜು ಹಾಗೂ ಇತರ ಸಾಮೂಹಿಕ ಕಾರ್ಯಕ್ರಮಗಳು ಇಲ್ಲದ ಕಾರಣ ಗ್ರಾಹಕರ ಸಂಖ್ಯೆಯೂ ಕಡಿಮೆ ಇದೆ. ಅಲ್ಲದೇ, ಲಾಕ್‌ಡೌನ್ ಬಳಿಕ ಜನರು ಪಾರ್ಸೆಲ್‌ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಅದಕ್ಕಾಗಿ, ನಾವೂ ಸದ್ಯ ಪಾರ್ಸೆಲ್‌ಗೆ ಆದ್ಯತೆ ನೀಡುತ್ತಿದ್ದೇವೆ. ಆದರೂ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸರ್ವಿಸ್ ನೀಡಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ತಿಳಿಸಿದರು.

ಸ್ವಾರಸ್ಯಕರ ಚರ್ಚೆಗೆ ವೇದಿಕೆ

ಕೋವಿಡ್–19 ಬಳಿಕ ಮಾಸ್ಕ್, ಅಂತರ ಹಾಗೂ ಸ್ಯಾನಿಟೈಸ್ ಕಡ್ಡಾಯವಾಗಿದ್ದು, ಸ್ವಾರಸ್ಯಕರ ಚರ್ಚೆಗೆ ವೇದಿಕೆಯಾಗಿವೆ.

‘ಹೋಟೆಲ್‌ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿದರೆ, ಚಹಾ–ತಿಂಡಿ ಸೇವನೆ ಹೇಗೆ?’ ಎಂದು ಕೆಲವರು ಪ್ರಶ್ನೆಗಳನ್ನು ಹರಿಯಬಿಟ್ಟಿದ್ದಾರೆ.

ಇನ್ನೊಂದೆಡೆ, ಒಂದು ಟೇಬಲ್‌ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಇದೆ. ಹೀಗಾಗಿ, ‘ಗಂಡ–ಹೆಂಡತಿ ಹಾಗೂ ಮಕ್ಕಳು ಜೊತೆಯಾಗಿ ಬಂದರೆ, ಯಾರೆಲ್ಲ ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕು?’ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಅಲ್ಲದೇ, ಸ್ಯಾನಿಟೈಸ್‌ ಯಾವಾಗ ಮಾಡಬೇಕು? ಎಂಬ ಜಿಜ್ಞಾಸೆ ಶುರುವಾಗಿವೆ. ಆಹಾರ ಸೇವನೆ ಮೊದಲು ಸ್ಯಾನಿಟೈಸ್ ಮಾಡಿದರೆ, ಅದರ ರಾಸಾಯನಿಕ ದೇಹಕ್ಕೆ ಸೇರಬಹುದು. ಬಳಿಕ ಸ್ಯಾನಿಟೈಸ್ ಮಾಡಿದರೆ ಏನು ಪ್ರಯೋಜನ? ಎಂಬ ಚರ್ಚೆಯೂ ಶುರುವಾಗಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ, ‘ಕೋವಿಡ್‌–19 ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆಗಳನ್ನು ಕೈಗೊಳ್ಳುವಂತೆ ನಮಗೆ ಸೂಚನೆ ಬಂದಿದೆ. ಆದರೆ, ನಿರ್ದಿಷ್ಟ ಮಾರ್ಗಸೂಚಿ ಇನ್ನೂ ಕೈ ಸೇರಿಲ್ಲ. ಹೀಗಾಗಿ, ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.