ADVERTISEMENT

ಸಂರಕ್ಷಿತ ಅರಣ್ಯದಲ್ಲಿ ಬೇಟೆ: 12 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:23 IST
Last Updated 16 ಆಗಸ್ಟ್ 2021, 14:23 IST
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಬೇಟೆಗಾರರಿಂದ ವಶಪಡಿಸಿಕೊಂಡ ವಸ್ತುಗಳು –ಪ್ರಜಾವಾಣಿ ಚಿತ್ರ
ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಬೇಟೆಗಾರರಿಂದ ವಶಪಡಿಸಿಕೊಂಡ ವಸ್ತುಗಳು –ಪ್ರಜಾವಾಣಿ ಚಿತ್ರ   

ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಗುಡ್ಡೆಯಂಗಡಿ ಮೆನೇಜಸ್ ಕಂಪೌಂಡ್‌ನ ಜಾನ್ ಸಿ.ಮೆನೇಜಸ್ ಎಂಬುವರ ಮನೆ ಹಿಂಬದಿಯಲ್ಲಿ ಬೇಟೆಯಾಡಿ ತಂದಿದ್ದ ಕಾಡು ಹಂದಿಯ ಮಾಂಸ ತೆಗೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.

ಮೂಡುಬಿದಿರೆ ತಾಲ್ಲೂಕು ಮಿತ್ತಬೈಲು ನಿವಾಸಿ ಜಾನ್ ಸಿ.ಮೆನೇಜಸ್, ಕಲ್ಲಮುಂಡ್ಕೂರು ಗ್ರಾಮದ ನಿವಾಸಿಗಳಾದ ಶ್ರೀನಿವಾಸ, ಗುರುಪ್ರಸಾದ್, ಅಜೇಯ್, ಸನತ್, ಗಣೇಶ್ ಬೆಳುವಾಯಿ ಗ್ರಾಮದ ಜೋಯೆಲ್ ಅನಿಲ್ ಡಿಸೋಜ, ಪಾಲಡ್ಕ ಗ್ರಾಮದ ಹರೀಶ್ ಪೂಜಾರಿ, ನೋಣಯ್ಯ, ಕಡಂದಲೆ ಗ್ರಾಮದ ಮೋಹನ್ ಗೌಡ, ರಮೇಶ್, ಕಾರ್ಕಳ ತಾಲ್ಲೂಕು ಬೋಳ ಗ್ರಾಮದ ವಿನಯ್ ಪೂಜಾರಿ ಬಂಧಿತರು.

ಖಚಿತ ಮಾಹಿತಿ ಮೇರೆಗೆ ಭಾನುವಾರ ತಡರಾತ್ರಿ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂರಕ್ಷಿತ ಅರಣ್ಯಕ್ಕೆ ಹೋಗಿ ಹಂದಿ ಬೇಟೆಯಾಡಿ ತಂದಿದ್ದರು. ಆರೋಪಿಗಳಿಂದ ಕೊಲ್ಲಲ್ಪಟ್ಟ ಎರಡು ಕಾಡು ಹಂದಿ, ನಾಲ್ಕು ಸಿಂಗಲ್ ಬ್ಯಾರೆಲ್ ರೈಫಲ್, ಎರಡು ಬಂದೂಕಿನ ತೋಟೆ, ಹಂದಿ ಹಿಡಿಯಲು ಉಪಯೋಗಿಸಿದ ನಾಲ್ಕು ಬಲೆ, ಕಬ್ಬಿಣದ ಬರ್ಚಿ, ಮೂರು ಹಲಗಿನ ಕತ್ತಿ, ಮೂರು ದೊಡ್ಡ ಚೂರಿ, ಗ್ಯಾಸ್ ಸಿಲಿಂಡರ್ ಮತ್ತು ಹಂದಿ ಚರ್ಮ ಸುಡಲು ಬಳಸಿದ ಗ್ಯಾಸ್ ಬರ್ನರ್, ಎರಡು ಮರದ ತುಂಡು, ಕಬ್ಬಿಣದ ಟೇಬಲ್, ಎರಡು ಓಮ್ನಿ ಕಾರು, 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ಪರವಾನಗಿಯ ಬಂದೂಕು ದುಷ್ಕೃತ್ಯಕ್ಕೆ ಬಳಕೆ: ‘ಕೃಷಿ ಬೆಳೆ ರಕ್ಷಣೆಗೆ ಪರವಾನಗಿ ಪಡೆದಿದ್ದ ಬಂದೂಕನ್ನು ಅಕ್ರಮವಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಳಕೆ ಮಾಡಲಾಗಿದೆ. ಹಂದಿ ಬೇಟೆ ಈ ತಂಡದ ಪ್ರಮುಖ ಉದ್ದೇಶವಾಗಿದ್ದು, ಬೇಟೆಗೆ ಹೋಗಿದ್ದಾಗ ಸಿಗುವ ಇತರ ಪ್ರಾಣಿಗಳನ್ನು ಕೂಡ ಕೊಂದು ಮಾಂಸ ಮಾಡುತ್ತಿದ್ದರು. ಸ್ನೇಹಿತರ ತಂಡ ಇದಾಗಿದ್ದು, ಸ್ವಂತಕ್ಕಾಗಿ ಬೇಟೆಯಾಡಿ ಮಾಂಸ ಮಾಡುವುದು ಹಾಗೂ ಇತರರು ಕರೆದಾಗ ಹೋಗಿ ಬೇಟೆಯಾಗಿ ಕೊಡುತ್ತಿದ್ದರು. ತಂಡ ಹಿಂದೆಯೂ ಹಲವು ಬಾರಿ ಬೇಟೆಯಾಡಿದೆ. ಮೂಡುಬಿದಿರೆ ಹಾಗೂ ಕಾರ್ಕಳ ತಾಲ್ಲೂಕುಗಳಲ್ಲಿ ಇಂತಹ ಹಲವು ತಂಡಗಳಿರುವ ಕುರಿತು ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.