ಉಳ್ಳಾಲ: ಆವಿಷ್ಕಾರಗಳು ಆಲಸ್ಯರನ್ನಾಗಿಸದೆ ವಾಸ್ತವ ಬದುಕಿಗೆ ಸಹಕಾರ ಆಗುವಂತಿರಲಿ ಎಂದು ಇನ್ಫೋಸಿಸ್‌ನ ಮಂಗಳೂರು ಮುಖ್ಯಸ್ಥ ವಾಸುದೇವ ಕಾಮತ್ ಹೇಳಿದರು.
ಕೊಣಾಜೆ ನಡುಪದವು ಪಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳೂರು ಉಪ ವಿಭಾಗದ ವತಿಯಿಂದ ಆಯೋಜಿಸಲಾದ 9ನೇ ಅಂತರರಾಷ್ಟ್ರೀಯ ‘ಐಇಇಇ ಡಿಸ್ಕವರ್ 25’ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶ ಸಿಗುತ್ತದೆ. ಇದರ ಮೂಲಕ ಹೊಸ ಆಲೋಚನೆಗಳು, ಆವಿಷ್ಕಾರಾತ್ಮಕ ಪರಿಹಾರಗಳು ಹಾಗೂ ನವೀನ ಚಿಂತನೆಗಳು ಬೆಳೆಯುತ್ತವೆ. ವಿದ್ಯಾರ್ಥಿಗಳು ಸೈಬರ್ ದಾಳಿಗಳಿಂದ ರಕ್ಷಣೆ, ಡಿಜಿಟಲ್ ಸುರಕ್ಷತೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎನ್ನುವುದರ ಬಗ್ಗೆ ಗಮನಹರಿಸಬೇಕು. ಪ್ರಾಯೋಗಿಕ ಜ್ಞಾನ ಮತ್ತು ಪ್ರಯೋಗಾತ್ಮಕ ಅಧ್ಯಯನದ ಮೂಲಕ ಸಮಾಜಕ್ಕೆ ಸಹಾಯ ಮಾಡುವ ಹೊಸ ಆವಿಷ್ಕಾರಗಳನ್ನು ತರುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪುಸ್ತಕದ ಜ್ಞಾನಕ್ಕಿಂತ ಪ್ರಾಯೋಗಿಕ ಅನುಭವ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಜನರ ಜೀವನ ಸುಧಾರಣೆಗೆ ಉಪಯೋಗವಾಗುವ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ಆವಿಷ್ಕಾರಾತ್ಮಕ ಚಿಂತನೆಗಳು ನಮ್ಮ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುವಂತಾಗಬೇಕು ಎಂದರು.
ಪಿಎಇಟಿ ಮಂಗಳೂರಿನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ, ಐಇಇಇ ಡಿಸ್ಕವರ್-2025ದ ಸಹಾಧ್ಯಕ್ಷ ಎಸ್.ವಿ.ಸತ್ಯನಾರಾಯಣ, ಎನ್‌ಎಂಎಂಐಟಿ ಪ್ರೊ. ವಾಸುದೇವ ಆಚಾರ್ಯ, ಎಜಿಎಂ (ಕ್ಯಾಂಪಸ್) ಶರ್ಫುದ್ದೀನ್ ಪಿ.ಕೆ., ಪಿಎಪಿಟಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್, ಪಿಎಐಪಿ ಪ್ರಾಂಶುಪಾಲ ಅಫೀಫಾ ಸಲೀಮ್, ಡೀನ್ ಸಯ್ಯದ್ ಅಮೀನ್ ಎ., ಪಿಎಸಿಇ ಪ್ರಾಂಶುಪಾಲ ರಾಮಿಸ್ ಎಂ. ಕೆ. ಭಾಗವಹಿಸಿದ್ದರು. ಅನಾಲಾಗ್ ಐಪಿ ವಿನ್ಯಾಸ ನಿರ್ವಾಹಕ ಜಾವೆದ್ ಜಿ.ಎಸ್. ಮಾತನಾಡಿದರು.