ADVERTISEMENT

ಮಂಗಳೂರು | ಅನಧಿಕೃತ ಫ್ಲೆಕ್ಸ್; ಕಠಿಣ ಕ್ರಮ: ಜಿಲ್ಲಾಧಿಕಾರಿ ಎಚ್ಚರಿಕೆ

ಸದ್ಯದಲ್ಲಿ ಪ್ರಿಂಟರ್‌ಗಳ ಸಭೆ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 5:25 IST
Last Updated 20 ಆಗಸ್ಟ್ 2022, 5:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು:ವಿವಾದಾತ್ಮಕ ಫ್ಲೆಕ್ಸ್‌ ಕಂಡರೆ ಕೂಡಲೇ ಸಂಬಂಧಿಸಿದ ಸ್ಥಳದ ಅಧಿಕಾರಿಗಳು ತೆರವುಗೊಳಿಸಬೇಕು. ಫ್ಲೆಕ್ಸ್ ಹಾಕುವ ಮುನ್ನ ಸಂಬಂಧಿಸಿದ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು,‌ ಹಾಗೂ ಅದನ್ನು ಮುದ್ರಿಸಿದವರ ವಿವರ ಅದರಲ್ಲಿರಬೇಕು. ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಫ್ಲೆಕ್ಸ್ ಪ್ರಿಂಟರ್‌ಗಳ ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆ, ಅನಧಿಕೃತ ಫ್ಲೆಕ್ಸ್‌ ತೆರವು ಹಾಗೂ ಹಬ್ಬ–ಹರಿದಿನಗಳಲ್ಲಿ ಡಿಜೆ ಹಾಗೂ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಚರ್ಚಿಸಲು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಅಧಿಕೃತ ಸ್ಥಳಗಳಲ್ಲಿ ಅನಧಿಕೃತ ಫ್ಲೆಕ್ಸ್ ಹಾಕುವ, ದ್ವೇಷ, ವಿವಾದಾತ್ಮಕ ಸಂದೇಶ ಇರುವ ಹಾಗೂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಫ್ಲೆಕ್ಸ್‌ ಹಾಕುವವರ ವಿರುದ್ಧ ಪೊಲೀಸರ ಸಹಕಾರದಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

ಅಕ್ರಮ ಮರಳು ಸಾಗಣೆ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಹಿಸಬೇಕು. ಉಳ್ಳಾಲ, ಕೋಟೆಪುರ, ಸೋಮೇಶ್ವರ, ಉಚ್ಚಿಲ, ಪೇರಿಬೈಲು, ತಲಪಾಡಿ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಸಾಗಣೆಯ ಬಗ್ಗೆ ವರದಿಯಾಗುತ್ತಿದೆ. ಅದನ್ನು ತಡೆಗಟ್ಟಲು ಜಿಲ್ಲಾಡಳಿತ ಕಠಿಣ ಕ್ರಮನು ಕೈಗೊಂಡಿದ್ದು, ಅಧಿಕಾರಿಗಳ ನಿಯೋಜನೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಡರಾತ್ರಿ ಸಂಚರಿಸುವ ವಾಹನಗಳ ಮೇಲೆ ಕಣ್ಣಿಡಬೇಕು, ಮುಖ್ಯವಾಗಿ ಪೊಲೀಸ್ ಚೆಕ್ ಪೋಸ್ಟ್‌ಗಳಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಹೈಕೋರ್ಟ್‌ ಆದೇಶ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಡಿಜೆ ಸೆಟ್ ಹಾಗೂ ಧ್ವನಿವರ್ಧಕಗಳನ್ನು ಬಳಸಬೇಕು. ಈ ಬಗ್ಗೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ನಿಭಾಯಿಸಬೇಕಾದ ಕರ್ತವ್ಯಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು ಅವುಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಮದನ್ ಮೋಹನ್, ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹೇಶ್ ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಲಿಂಗರಾಜು, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಕರಣ ದಾಖಲಿಸಲು ಸೂಚನೆ

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ ಅನ್ನು ಪರಿಶೀಲಿಸಿ, ಮೂವರು ಡಿಎಸ್‍ಪಿಗಳು ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೂಚಿಸಿದರು.

ಅಕ್ರಮ ಮರಳು ಸಾಗಣೆ ವಾಹನಗಳ ವಿರುದ್ಧ ಪ್ರಕರಣದ ದಾಖಲಿಸಬೇಕು. ಪ್ರಮುಖವಾಗಿ ಹೊತ್ತಲ್ಲದ ಹೊತ್ತಿನಲ್ಲಿ ಮರಳು ಸಾಗಾಣೆ ವಾಹನಗಳು ಸಂಚರಿಸುವುದನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಂಬಂಧಿಸಿದ ವಾಹನಗಳ ಪರವಾನಗಿಯನ್ನು ರದ್ದುಪಡಿಸಿ, ಆ ವಾಹನಗಳನ್ನು ವಶಕ್ಕೆ ಪಡೆಯಬೇಕು. ಅಕ್ರಮ ಮರಳು ಶೇಖರಣೆ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.