ADVERTISEMENT

ಮಂಗಳೂರಲ್ಲಿ ವಿದೇಶಿ ಕಾರ್ಮಿಕರ ದಾಖಲೆ ಪರಿಶೀಲನೆಗೆ ಪೊಲೀಸರ ವಿಶೇಷ ಅಭಿಯಾನ

4 ಸಾವಿರ ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ– ನಗರ ಪೊಲೀಸರಿಂದ ವಿಶೇಷ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 10:44 IST
Last Updated 4 ಜುಲೈ 2022, 10:44 IST
ಮಂಗಳೂರಿನ ರೊಸಾರಿಯೊ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ದಾಖಲೆ ಪರಿಶೀಲನೆಗಾಗಿ ಕಾದಿರುವ ವಲಸೆ ಕಾರ್ಮಿಕರು
ಮಂಗಳೂರಿನ ರೊಸಾರಿಯೊ ಸಾಂಸ್ಕೃತಿಕ ಸಭಾಂಗಣದಲ್ಲಿ ಸೋಮವಾರ ದಾಖಲೆ ಪರಿಶೀಲನೆಗಾಗಿ ಕಾದಿರುವ ವಲಸೆ ಕಾರ್ಮಿಕರು   

ಮಂಗಳೂರು: ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಪತ್ತೆಹಚ್ಚುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರಸೂಚನೆ ನೀಡಿದ ಮೇರೆಗೆ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವ ಅಭಿಯಾನ ನಗರ ಪೊಲೀಸ್‌ ಕಮಿಷನರೇಟ್‌ನ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್, ‘ಇದುವರೆಗೆ ಸುಮಾರು 4ಸಾವಿರ ವಲಸೆ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದ್ದೇವೆ. ಅವರಲ್ಲಿ 518 ಮಂದಿ ಸಲ್ಲಿಸಿರುವ ದಾಖಲಾತಿಗಳು ಅಪೂರ್ಣವಾಗಿವೆ. ಈ ಕಾರ್ಮಿಕರು ಎಲ್ಲಿ ಕೆಲಸ ಮಾಡುತ್ತಿದ್ದಾರೆ, ಎಲ್ಲಿ ಉಳಿದುಕೊಂಡಿದ್ದಾರೆ ಎಂಬ ವಿವರಗಳನ್ನು ಪೊಲೀಸ್‌ ಅಧಿಕಾರಿಗಳು ಕಲೆ ಹಾಕಿದ್ದಾರೆ. ಅವರನ್ನು ವಶಕ್ಕೆ ತೆಗೆದುಕೊಂಡು, ಅವರ ಬಳಿ ಇರುವ ಮಾತದಾರರ ಗುರುತಿನ ಚೀಟಿ, ಆಧಾರ್‌ ಮತ್ತಿತರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.

‘ಮಂಗಳೂರು ಔದ್ಯೋಗಿಕ ಕೇಂದ್ರವಾಗಿದೆ. ಎಂಆರ್‌ಪಿಎಲ್‌ ಸೇರಿದಂತೆ ಅನೇಕ ದೊಡ್ಡ ಖಾರ್ಕಾನೆಗಳಿವೆ. ಬೇರೆ ಬೇರೆ ಪ್ರದೇಶಗಳ ಜನ ಇಲ್ಲಿ ಮೀನುಗಾರಿಕೆಯಲ್ಲೂ ತೊಡಗಿಸಿದ್ದಾರೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣವೂ ಇಲ್ಲಿದೆ. ರೈಲ್ವೆ ಸಂಪರ್ಕವೂ ಚೆನ್ನಾಗಿದೆ. ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇಲ್ಲಿರುವುದರಿಂದ ಬಾಂಗ್ಲಾದಿಂದ ಅಕ್ರಮ ವಲಸಿಗರು ಬಂದಿರುವ ಸಾಧ್ಯತೆ ಇದೆ. ಅನುಮಾನಾಸ್ಪದವಾಗಿರುವ ಕಾರ್ಮಿಕರನ್ನು ಠಾಣೆಗೆ ಕರೆಸಿಕೊಂಡು ದಾಖಲಾತಿಗಳನ್ನು ಪರಿಶೀಲಿಸಿದ್ದೇವೆ. ಪರಿಶೀಲನೆ ಕಾರ್ಯ ಒಂದು ವಾರ ನಡೆದಿದೆ. ದಾಖಲಾತಿ ಸರಿಯಾಗಿ ನೀಡದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಅವರಿಗೆ ಸಂಬಂಧಿಸಿದ ಸುಮಾರು 20 ಅಂಶಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.

ADVERTISEMENT

‘ಕಾರ್ಮಿಕರ ಫೋನ್‌ ನಂಬರ್‌ ಹಾಗೂಫೋನ್‌ ಕರೆಗಳ ವಿವರ ಪಡೆದುಕೊಂಡಿದ್ದೇವೆ. ಅವರು ಯಾರ ಜೊತೆ ಮಾತನಾಡಿದ್ದಾರೆ, ವಿದೇಶಗಳಿಗೇನಾದರೂ ಕರೆ ಮಾಡಿದ್ದಾರೆಯೇ,ಬಾಂಗ್ಲಾದೇಶದ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಾರ್ಮಿಕರ ಮೊಬೈಲ್‌ನ ಗ್ಯಾಲರಿಯಲ್ಲಿ ರೈಲ್ವೆ ನಿಲ್ದಾಣ, ಮತ್ತಿತರ ಚಿತ್ರಗಳೇನಾದರೂ ಇವೆಯೇ ಎಂದು ಹುಡುಕಿ, ಅವರ ಊರಿಗೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದೇವೆ. ಬ್ಯಾಂಕ್‌ ಖಾತೆ ಮೂಲಕ ಎಲ್ಲಿಗೆ ಹಣ ಕಳುಹಿಸಿದ್ದಾರೆ ಎಂದೂ ಮಾಹಿತಿ ಪಡೆದಿದ್ದೇವೆ.ಇದಕ್ಕೆ ಬ್ಯಾಂಕ್‌ ಅಧಿಕಾರಿಗಳ ನೆರವು ಪಡೆದಿದ್ದೇವೆ. ದಾಖಲಾತಿ ಪರಿಶೀಲನೆಗೆ ಕಂದಾಯ ಇಲಾಖೆ ಅಧಿಕಾರಿಗಳೂ ನೆರವಾಗಿದ್ದಾರೆ’ ಎಂದರು.

‘ಹೆಚ್ಚಿನ ಕಾರ್ಮಿಕರು ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಉತ್ತರ ಪ್ರದೇಶ ಹಾಗೂ ತಮಿಳುನಾಡಿನವರು. ಯಾರಿಗೂ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಅವರು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಅಲ್ಲ ಎಂಬುದನ್ನುಖಚಿತಪಡಿಸಿಕೊಳ್ಳುವುದಷ್ಟೇ ನಮ್ಮ ಉದ್ದೇಶ. ವಿದೇಶದಿಂದ ಬಂದು ಇಲ್ಲಿ ಅಕ್ರಮವಾಗಿ ನೆಲೆಸಿರುವವರು ಪತ್ತೆಯಾದರೆ, ಅವರ ವಿರುದ್ಧ ಪಾಸ್‌ಪೋರ್ಟ್‌ ಕಾಯ್ದೆ ಮತ್ತು ವಿದೇಶಿಗರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ’ ಎಂದರು.

2021ರ ಜೂನ್‌ನಲ್ಲಿ ‌ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಶ್ರೀಲಂಕಾದ 38 ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು. ಅವರ ಬಳಿ ಪಾಸ್‌ಪೋರ್ಟ್‌ ಇರಲಿಲ್ಲ. ಕೆನಡಾದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಅವರನ್ನು ಕರೆತರಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ.

‘ಸಿರಿಯಾ ನಾವೀಕರ ಮೇಲೆ ವಿಶೇಷ ನಿಗಾ’

‘ಅರಬ್ಬೀ ಸಮುದ್ರದಲ್ಲಿ ಇತ್ತೀಚೆಗೆ ಮುಳುಗಿದ ಎಂ.ವಿ.ಪ್ರಿನ್ಸೆಸ್ ಮಿರಾಲ್‌ ಹಡಗಿನಲ್ಲಿದ್ದ 15 ಮಂದಿ ಸಿರಿಯಾದ ನಾವೀಕರನ್ನು ಅವರ ದೇಶಕ್ಕೆ ಕಳುಹಿಸಿಕೊಡುವ ಬಗ್ಗೆ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಸಿರಿಯಾ ದೇಶದ ರಾಯಭಾರ ಕಚೇರಿ ಜೊತೆ ಚರ್ಚಿಸುತ್ತಿದ್ದೇವೆ’ ಎಂದು ಶಶಿಕುಮಾರ್ ತಿಳಿಸಿದರು.

‘ಸದ್ಯಕ್ಕೆ ಅವರಿಗೆ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಿದ್ದೇವೆ. ಅವರು ಹೊರಗಡೆ ಹೋಗದಂತೆ ತಡೆಯಲು ದಿನದ 24 ಗಂಟೆಯೂ ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ವಲಸೆ ಇಲಾಖೆಯಿಂದ ಅಧಿಕೃತವಾಗಿ ಆದೇಶ ಬಂದ ಬಳಿಕ ಅವರ ದೇಶದ ರಾಯಭಾರ ಕಚೇರಿ ಮೂಲಕ ಅವರನ್ನು ಮರಳಿ ಸಿರಿಯಾಕ್ಕೆ ಕಳುಹಿಸಿಕೊಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.