ADVERTISEMENT

ದಕ್ಷಿಣ ಕನ್ನಡ: ಗಡಿ ಬಿಕ್ಕಟ್ಟು, ಮೀನುಗಾರಿಕೆಗೂ ಪೆಟ್ಟು

ಚೀನಾ ಮೂಲದ ಎಂಜಿನ್ ಅವಲಂಬಿಸಿದ ಬೋಟ್‌ಗಳು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:38 IST
Last Updated 16 ಜುಲೈ 2020, 17:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಭಾರತ–ಚೀನಾ ನಡುವಿನ ಗಡಿ ಬಿಕ್ಕಟ್ಟು, ಇಲ್ಲಿನ ಕರಾವಳಿಯ ಮೀನುಗಾರಿಕೆ ಮೇಲೂ ಕರಿಛಾಯೆ ಬೀರಿದೆ.

ಕರಾವಳಿಯಲ್ಲಿ ಮೀನುಗಾರಿಕೆ ನಡೆಸುವ ಬಹುತೇಕ ಬೋಟ್‌ಗಳು ಚೀನಾ ಮೂಲದ ಕಂಪನಿಗಳ ಎಂಜಿನ್‌ಗಳನ್ನು ಹೊಂದಿದ್ದು, ಬಿಡಿಭಾಗಗಳ ಕೊರತೆ ಎದುರಿಸುತ್ತಿವೆ. ಜುಲೈ 31ರ ತನಕ ಮೀನುಗಾರಿಕೆ ನಿರ್ಬಂಧವಿದ್ದು, ಈ ಅವಧಿಯಲ್ಲೇ ಬೋಟ್‌ಗಳ ದುರಸ್ತಿ, ಸರ್ವೀಸ್, ಆಧುನೀಕರಣ ಇತ್ಯಾದಿ ನಡೆಸಬೇಕಾಗಿದ್ದು, ಅಡಚಣೆ ಉಂಟಾಗಿದೆ.

ಈಚೆಗೆ ನಡೆದ ಸಭೆಯೊಂದರಲ್ಲಿ ಕರಾವಳಿ ಮೀನುಗಾರರು ಈ ಕುರಿತ ತಮ್ಮ ಸಂಕಷ್ಟಗಳನ್ನು ತೋಡಿಕೊಂಡಿದ್ದಾರೆ. ಅಲ್ಲದೇ, ತುರ್ತಾಗಿ ಸಮಸ್ಯೆ ಪರಿಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 1,331 ಟ್ರಾಲ್ ಬೋಟ್, 1,500 ಪರ್ಸೀನ್ ಬೋಟ್ ಹಾಗೂ ಇತರೆ 500 ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಈಗಾಗಲೇ ಕೊರೊನಾ, ಚಂಡಮಾರುತ ಮತ್ತಿತರ ಸಮಸ್ಯೆಗಳಿಂದ ನಷ್ಟಕ್ಕೀಡಾದ ಮೀನುಗಾರರು, ಈ ವರ್ಷದ ಮೀನುಗಾರಿಕಾ ಋತು ಆರಂಭಕ್ಕೂ ಮೊದಲ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ.

‘ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಇಲ್ಲಿನ ಶೇ 90ಕ್ಕೂ ಹೆಚ್ಚು ಬೋಟ್‌ಗಳು ಚೀನಾ ಮೂಲದ ಕಂಪನಿಗಳ ಎಂಜಿನ್‌ಗಳನ್ನು ಹೊಂದಿವೆ. ಈ ಎಂಜಿನ್‌ವೊಂದಕ್ಕೆ ಸುಮಾರು ₹20 ಲಕ್ಷದಷ್ಟು ಬೆಲೆ ಇದೆ. ಇದರಿಂದಾಗಿ ಬಿಡಿಭಾಗಕ್ಕಾಗಿ ಎಂಜಿನ್‌ ಬದಲಾಯಿಸುವುದು ಕಷ್ಟಸಾಧ್ಯ. ಹೀಗಾಗಿ, ಚೀನಾ ಮೂಲದ ಕಂಪೆನಿಗಳ ಬಿಡಿಭಾಗಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ’ ಎಂದು ಟ್ರಾಲ್ ಬೋಟ್‌ ಮಾಲೀಕರೊಬ್ಬರು ತಿಳಿಸಿದರು.

‘ಮೀನುಗಾರಿಕೆಯಲ್ಲಿ ಬೋಟ್‌ ಎಂಜಿನ್‌ಗಳು ಮಾತ್ರವಲ್ಲ, ಬಲೆ ಇತ್ಯಾದಿ ಸಾಮಗ್ರಿಗಳಿಗೂ ಚೀನಾ ಮೂಲದ ಕಂಪೆನಿಗಳ ಸಲಕರಣೆಗಳನ್ನು ಅವಲಂಬಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಮಿಕರ ಕೊರತೆ:‘ಮೀನುಗಾರಿಕೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮೂಲದ ಕಾರ್ಮಿಕರೇ ಹೆಚ್ಚಾಗಿದ್ದು, ಅವರನ್ನು ಕರೆದುಕೊಂಡು ಬರುವುದೂ ಸವಾಲಾಗಿದೆ. ಮಲ್ಪೆ ಮತ್ತಿತರ ಪ್ರದೇಶಗಳ ಕೆಲವು ಶ್ರೀಮಂತ ಮೀನುಗಾರರು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದು, ತಮ್ಮ ಹಾಗೂ ಪರಿಚಿತ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ. ಆದರೆ, ಒಂದೆರಡು ಬೋಟ್ ಹೊಂದಿರುವ ಸಣ್ಣ ಮೀನುಗಾರರು ಇಂತಹ ಪರಿಸ್ಥಿತಿ ನಿಭಾಯಿಸುವುದು ಹೇಗೆ?’ ಎಂದು ಮೀನುಗಾರರೊಬ್ಬರು ಪ್ರಶ್ನಿಸಿದರು.

ಗ್ಯಾಜೆಟ್‌ಗಳಿಗೂ ಸಮಸ್ಯೆ:ಚೀನಾದಿಂದ ಬಿಡಿಭಾಗಗಳ ಆಮದು ಸ್ಥಗಿತಗೊಂಡ ಕಾರಣ, ಮಾರುಕಟ್ಟೆಯಲ್ಲಿ ಗ್ಯಾಜೆಟ್‌ಗಳ ಕೊರತೆಯೂ ಉಂಟಾಗಿದೆ. ಖರೀದಿ, ದುರಸ್ತಿ, ಅಭಿವೃದ್ಧಿ, ನವೀಕರಣ ಸೇರಿದಂತೆ ಎಲ್ಲದಕ್ಕೂ ಗ್ರಾಹಕರು ಪರಿತಪಿಸುವಂತಾಗಿದೆ.

ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಹಾಗೂ ಎಲೆಕ್ಟ್ರಿಕಲ್ ಸಾಮಗ್ರಿಗಳಿಗೆ ಇಲ್ಲಿನ ಮಾರುಕಟ್ಟೆಯು ಚೀನಾವನ್ನು ಅವಲಂಬಿಸಿದೆ. ಚೀನಾದ ಕಂಪನಿಗಳ ಬ್ರಾಂಡ್‌ಗಳು ಮಾತ್ರವಲ್ಲದೇ, ಬಿಡಿಭಾಗಗಳೂ ಜನಪ್ರಿಯ. ಈಗ ಕೊರತೆತೀವ್ರವಾಗಿ ಕಾಡಲು ಆರಂಭಿಸಿದೆ.

ಇದರಿಂದಾಗಿ, ‘ಹಳೇ ಗ್ಯಾಜೆಟ್‌ಗಳಿಗೂ ಬೇಡಿಕೆ ಬಂದಿದೆ’ ಎನ್ನುತ್ತಾರೆ ಗ್ಯಾಜೆಟ್ ಉದ್ಯಮದಲ್ಲಿ ತೊಡಗಿಸಿಕೊಂಡವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.