ADVERTISEMENT

ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 10:22 IST
Last Updated 26 ಅಕ್ಟೋಬರ್ 2025, 10:22 IST
   

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕೆಟ್ಟು ನಿಂತಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ 31 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ರಕ್ಷಣೆ ಮಾಡಿದೆ.

ಗೋವಾದ ಐಎಫ್ ಬಿ ಸೆಂಟ್‌ಆಂಟೊನಿ 1 ಮೀನುಗಾರಿಕಾ‌ ದೋಣಿಯ ಸ್ಟೇರಿಂಗ್ ಗೇರ್ ಹದಗೆಟ್ಟಿದ್ದರಿಂದ 31 ಮೀನುಗಾರರು 11 ದಿನಗಳಿಂದ ಸಮುದ್ರದಲ್ಲಿ ಸಿಲುಕಿದ್ದರು. ದೋಣಿ ನಾಪತ್ತೆಯಾಗಿರುವ ಬಗ್ಗೆ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಲಾಗಿತ್ತು. ನಾಪತ್ತೆಯಾದ ದೋಣಿಯಲ್ಲಿ ಅಪಾಯಕ್ಕೆ ಸಿಲುಕಿದ್ದ‌ ಮೀನುಗಾರರ ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಭಾರತೀಯ ಕರಾವಳಿ ರಕ್ಷಣಾ ಪಡೆತು ಅ.24 ರಂದು ಕಾರ್ಯಾಚರಣೆ ಆರಂಭಿಸಿತ್ತು. ನಾಪತ್ತೆಯಾಗಿದ್ದ ನಾವೆಯು ನವ ಮಂಗಳೂರು ಬಂದರಿನಿಂದ 100 ನಾಟಿಕಲ್ ಮೈಲು ದೂರದಲ್ಲಿ ಸಂಪರ್ಕ ಕಳೆದುಕೊಡಿರುವುದು ಗೊತ್ತಾಗಿತ್ತು.

ದೋಣಿಯು ಕೊನೆಯದಾಗಿ ಕಾಣಿಸಿಕೊಂಡ ಸ್ಥಳಕ್ಕೆ‌ ಅರಬ್ಬಿ ಸಮುದ್ರದಲ್ಲಿ ಪಹರೆ ನಡೆಸುತ್ತಿದ್ದ ಐಸಿಜಿಎಸ್ ಕಸ್ತೂರಬಾ ಗಾಂಧಿ ಹಡಗನ್ನು ಕಳುಹಿಸಲಾಗಿತ್ತು. ಅದೇ ವೇಳೆ ಕೊಚ್ಚಿಯ ಕರಾವಳಿ ರಕ್ಷಣಾ ಪಡೆಯ ಡಾರ್ನಿಯರ್‌ ವಿಮಾನವನ್ನು ವೈಮಾನಿಕ ಶೋಧ ಕಾರ್ಯಕ್ಕಾಗಿ ಕಳುಹಿಸಿಕೊಡಲಾಗಿತ್ತು. ಅರಬ್ಬಿ ಸಮುದ್ರದಲ್ಲಿ ಕೆಲದಿನಗಳಿಂದ ಪ್ರಕ್ಷುಬ್ಧ ವಾತಾವರಣ ಇದ್ದುದರಿಂದ‌ ದೋಣಿಯು ಅಲೆಗಳ ಸೆಳೆತಕ್ಕೆ ಸಿಲುಕಿ ಕೆಲ ದೂರ ತೇಲಿಕೊಂಡು ಹೋಗಿತ್ತು. ಸಮಕಾಲೀನ ಹವಾಮಾನ ದತ್ತಾಂಶಗಳು ಹಾಗೂ ಸಂಯೋಜಿತ ಕಾರ್ಯಾಚರಣೆ ಕೇಂದ್ರದ ದತ್ತಾಂಶ ಬಳಸಿ ಕರಾವಳಿ ರಕ್ಷಣಾ ಪಡೆಯು ದೋಣಿಯು ತೇಲುತ್ತಿರುವ ಸಂಭಾವ್ಯ ಸ್ಥಳವನ್ನು ಪತ್ತೆಹಚ್ಚಿತ್ತು. ಆ ಸ್ಥಳಕ್ಕೆ ಧಾವಿಸಿ ತುರ್ತು ನೆರವು ನೀಡುವಂತೆ, ದೋಣಿಯನ್ನು ದಡಕ್ಕೆ ಎಳೆದು ತರಲು ನೆರವಾಗುವಂತೆ ಹಾಗೂ ದೋಣಿಯ ಸ್ಟೇರಿಂಗ್ ದುರಸ್ತಿಗೊಳಿಸಲು ಸಹಾಯ ಮಾಡುವಂತೆ ಕಸ್ತೂರಬಾ ಗಾಂಧಿ ಹಡಗಿಗೆ ಸೂಚನೆ ನೀಡಿತ್ತು. ಆಗಿರುವ ಹಾನಿಯ ಕುರಿತು ವಿಶ್ಲೇಷಿಸುವಂತೆಯೂ ಸೂಚಿಸಿತ್ತು.

ADVERTISEMENT

ಅಪಾಯಕ್ಕೆ‌ ಸಿಲುಕಿದ್ದ ಮೀನುಗಾರಿಕಾ ‌ದೋಣಿ ಇದ್ದ ಜಾಗವನ್ನು ತಲುಪಿದ ಕಸ್ತೂರಬಾ ಗಾಂಧಿ ಹಡಗು, ಅದನ್ನು ಇನ್ನೊಂದು‌ ಮೀನುಗಾರಿಕಾ ದೋಣಿಯ ನೆರವಿನಿಂದ ಹೊನ್ನಾವರ ಬಂದರಿಗೆ ಎಳೆದು ತರಲು ನೆರವಾಗಿತ್ತು.

ಸಮುದ್ರದಲ್ಲಿ ಅಪಾಯಕ್ಕೆ‌ ಸಿಲುಕಿದ ಮೀನುಗಾರರನ್ನು ಪ್ರತಿಕೂಲ ಹವಾಮಾನದ ಹೊರತಾಗಿಯೂ ತ್ವರಿತ ಮತ್ತು ಸಮನ್ವಯದಿಂದ ಕೂಡಿದ ಸಮುದ್ರ ಮತ್ತು ವಾಯು ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆಯ ಪ್ರಕಟಣೆ‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.