ADVERTISEMENT

121 ದೇಶಗಳಿಗೆ ಭಾರತದ ಮತ್ಸ್ಯೋತ್ಪನ್ನ

7,740 ದಶಲಕ್ಷ ಡಾಲರ್‌ ಮೌಲ್ಯದ ಸಾಗರ ಉತ್ಪನ್ನ ರಫ್ತು

ಚಿದಂಬರ ಪ್ರಸಾದ್
Published 11 ಏಪ್ರಿಲ್ 2022, 19:45 IST
Last Updated 11 ಏಪ್ರಿಲ್ 2022, 19:45 IST
   

ಮಂಗಳೂರು: ಸಾಗರ ಉತ್ಪನ್ನಗಳ ರಫ್ತಿನಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸಿದ್ದು, ಈ ವರ್ಷ ಒಟ್ಟು 774 ಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ. ಸರ್ಕಾರ 780.90 ಕೋಟಿ ಡಾಲರ್‌ ಗುರಿ ನಿಗದಿಪಡಿಸಿದ್ದು, ಶೇ 99.12 ರಷ್ಟು ಸಾಧನೆ ಮಾಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಸಾಗರ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ಶೇ 30 ರಷ್ಟು ವೃದ್ಧಿಯಾಗಿದೆ. ಈ ದಶಕದಲ್ಲಿ ಪ್ರತಿ ವರ್ಷ ಸರಾಸರಿ ಶೇ 8.23 ರಷ್ಟು ಪ್ರಗತಿ ಸಾಧಿಸಲಾಗಿದೆ.

2021–22 ರಲ್ಲಿ ಜಗತ್ತಿನ 121 ದೇಶಗಳಿಗೆ ಭಾರತದಿಂದ ಸಾಗರ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಈ ಪೈಕಿ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿದೆ. 11 ವರ್ಷಗಳಿಂದ ಭಾರತದ ಸಾಗರ ಉತ್ಪನ್ನಗಳಿಗೆ ಅಮೆರಿಕದಲ್ಲಿ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ADVERTISEMENT

ಈ ವರ್ಷ ಅಮೆರಿಕಕ್ಕೆ 302 ಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಸಾಗರ ಉತ್ಪನ್ನ ರಫ್ತು ಮಾಡುವ ಗುರಿ ಹೊಂದಲಾಗಿತ್ತು. ಆದರೆ, 331.50 ಕೋಟಿ ಡಾಲರ್‌ ಮೌಲ್ಯದ ರಫ್ತು ಸಾಧ್ಯವಾಗಿದೆ. ಈ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ.

ಎರಡನೇ ಸ್ಥಾನದಲ್ಲಿರುವ ಚೀನಾಕ್ಕೆ 102.10 ಕೋಟಿ ಡಾಲರ್‌ ರಫ್ತಿನ ಗುರಿ ಇದ್ದು, ಈ ಬಾರಿ 112.10 ಕೋಟಿ ಡಾಲರ್ ಮೌಲ್ಯದ ರಫ್ತು ಮಾಡಲಾಗಿದೆ. ಮೂರನೇ ಸ್ಥಾನದಲ್ಲಿ ಜಪಾನ್‌ ಇದ್ದು, 42.80 ಕೋಟಿ ಡಾಲರ್‌ ಗುರಿಯಿದ್ದರೂ, 44.80 ಕೋಟಿ ಡಾಲರ್‌ ಮೌಲ್ಯದ ಸಾಗರ ಉತ್ಪನ್ನ ರಫ್ತು ಮಾಡಲಾಗಿದೆ.

‘ಅಮೆರಿಕ, ಚೀನಾ ಹಾಗೂ ಜಪಾನ್‌ ದೇಶಗಳಿಗೆ ಒಟ್ಟು ರಫ್ತಿನ ಶೇ 63 ರಷ್ಟು ಸಾಗರ ಉತ್ಪನ್ನಗಳನ್ನು ಪೂರೈಕೆ ಮಾಡಲಾಗಿದೆ. ಪ್ರಮುಖ 5 ದೇಶಗಳಿಗೆ ಒಟ್ಟು ರಫ್ತಿನ ಶೇ 70 ರಷ್ಟು ಸಾಗರ ಉತ್ಪನ್ನ ರಫ್ತು ಮಾಡಲಾಗಿದೆ. ಮೊದಲ 10 ಸ್ಥಾನದಲ್ಲಿರುವ ದೇಶಗಳಿಗೆ ಶೇ 82 ರಷ್ಟು ಪೂರೈಕೆ ಮಾಡಲಾಗಿದೆ. ಉಳಿದ 111 ದೇಶಗಳಿಗೆ ಶೇ 18ರಷ್ಟು ಸಾಗರ ಉತ್ಪನ್ನ ರಫ್ತು ಮಾಡಲಾಗಿದೆ’ ಎಂದು ಸಾಗರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಮಂಗಳೂರು ಪ್ರಾದೇಶಿಕ ಕಚೇರಿ ಉಪ ನಿರ್ದೇಶಕ ಪ್ರೇಮದೇವ್‌ ಕೆ.ವಿ. ತಿಳಿಸಿದ್ದಾರೆ.

ಕೋವಿಡ್–19 ನಿಂದಾಗಿ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ರಫ್ತು ಸಾಧ್ಯವಾಗಿರಲಿಲ್ಲ. ಮೀನುಗಾರಿಕೆ ಶುರುವಾಗಿದ್ದು, ಈ ಬಾರಿ ಮೊದಲಿನಂತೆ ಸಾಗರ ಉತ್ಪನ್ನ ರಫ್ತು ಆಗುತ್ತಿದೆ.ಪ್ರೇಮದೇವ್‌ ಕೆ.ವಿ., ಎಂಪಿಇಡಿಎ ಮಂಗಳೂರು ಪ್ರಾದೇಶಿಕ ಕಚೇರಿ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.