ADVERTISEMENT

ರಸ್ತೆ ಬದಿ ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ದಂಡ ವಿಧಿಸಿದ ಒಳಮೊಗ್ರು ಗ್ರಾ.ಪಂ.!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:58 IST
Last Updated 11 ಸೆಪ್ಟೆಂಬರ್ 2025, 4:58 IST
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾರ-ಬಿಜತ್ರೆ ರಸ್ತೆಯಲ್ಲಿ ಸುರಿದಿದ್ದ ತ್ಯಾಜ್ಯ
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾರ-ಬಿಜತ್ರೆ ರಸ್ತೆಯಲ್ಲಿ ಸುರಿದಿದ್ದ ತ್ಯಾಜ್ಯ   

ಪುತ್ತೂರು: ತಾಲ್ಲೂಕಿನ ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋದವರನ್ನು ಪತ್ತೆ ಹಚ್ಚಿರುವ ಪಂಚಾಯಿತಿಯು ಕಸ ಎಸದವರಿಗೆ ದಂಡ ವಿಧಿಸುವ ಜತೆಗೆ ಕಸವನ್ನು ಅವರಿಂದಲೇ ತೆರವು ಮಾಡಿಸಿದೆ.

ಒಳಮೊಗ್ರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾರ-ಬಿಜತ್ರೆ ರಸ್ತೆಯಲ್ಲಿ ಯಾರೋ ಕಸವನ್ನು ಸುರಿದು ಹೋಗಿದ್ದರು. ತ್ಯಾಜ್ಯ ರಾಶಿಯ ಫೋಟೋವನ್ನು ಸ್ಥಳೀಯ ಸದಸ್ಯೆ ರೇಖಾ ಯತೀಶ್ ಬಿಜತ್ರೆ ಅವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.   ತ್ಯಾಜ್ಯದಲ್ಲಿ ಹುಡುಕಾಡಿದ್ದ ವೇಳೆ ವಿದ್ಯುತ್ ಬಿಲ್ಲೊಂದು ಸಿಕ್ಕಿತ್ತು. ಆ ವಿದ್ಯುತ್ ಬಿಲ್ಲನ್ನು ಮೆಸ್ಕಾಂ ಎಂಜಿನಿಯರ್‌ಗೆ ಕಳುಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಈ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಇದು ತ್ಯಾಜ್ಯ ಎಸೆದವರ ಪತ್ತೆಗೆ ಸಹಾಯಕವಾಯಿತು. 

‘ತ್ಯಾಜ್ಯ ಎಸೆದ ಬೆಳ್ಳಿಪ್ಪಾಡಿ ಭಾಗದ ವ್ಯಕ್ತಿಯೊಬ್ಬರಿಗೆ ಕರೆ ಮಾಹಿತಿ ವಿಚಾರಿಸಿದಾಗ ತಮ್ಮ ಕೆಲಸಗಾರರು ತ್ಯಾಜ್ಯವನ್ನು ತಂದು ಅಲ್ಲಿ ಎಸೆದಿರಬಹುದು ಎಂದು ತಪ್ಪೊಪ್ಪಿಕೊಂಡಿದ್ದರು. ಅವರಿಗೆ ದಂಡನೆ ವಿಧಿಸಿ, ಅವರಿಂದಲೇ ಎಸೆದ ತ್ಯಾಜ್ಯ ತೆರವುಗೊಳಿಸಲಾಗಿದೆ’ ಎಂದು ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ತಿಳಿಸಿದ್ದಾರೆ.

ADVERTISEMENT

ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಸುರಿಯುವುದು ಅಪರಾಧ. ಮನೆಯಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಸ್ವಚ್ಚತಾ ವಾಹಿನಿ ವಾಹನಕ್ಕೆ ನೀಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.