ADVERTISEMENT

ಚುನಾವಣಾಧಿಕಾರಿ ಯೋಗೇಶ್‌ ವಿರುದ್ಧ ವಿಚಾರಣೆ

ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ಹೊರಹೋದ ಆರೋಪ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 14:52 IST
Last Updated 4 ನವೆಂಬರ್ 2019, 14:52 IST

ಮಂಗಳೂರು: ಮಹಾನಗರ ಪಾಲಿಕೆಯ ಐದು ವಾರ್ಡ್‌ಗಳ ಚುನಾವಣಾಧಿಕಾರಿಯಾಗಿರುವ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಬಿ.ಯೋಗೇಶ್‌ ಅವರು ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಟ್ಟು ಹೋಗುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ವಿಚಾರಣೆಗೆ ಆದೇಶಿಸಿದ್ದಾರೆ.

ಪಾಲಿಕೆಯ 11ರಿಂದ 15ನೇ ಸಂಖ್ಯೆಯ ವಾರ್ಡ್‌ಗಳ ಚುನಾವಣಾಧಿಕಾರಿಯಾಗಿ ಯೋಗೇಶ್‌ ಅವರನ್ನು ನೇಮಕ ಮಾಡಲಾಗಿದೆ. ನಾಮಪತ್ರ ಸಲ್ಲಿಕೆಯ ಅವಧಿಯಲ್ಲೇ ಅವರು ಅನುಮತಿ ಪಡೆಯದೇ ಮಂಗಳೂರಿನಿಂದ ತಮ್ಮ ಸ್ವಂತ ಊರು ತರೀಕೆರೆಗೆ ಹೋಗಿದ್ದರು ಎಂಬ ದೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ಬಂದಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಒಬ್ಬ ಚುನಾವಣಾಧಿಕಾರಿಯ ವಿರುದ್ಧ ಇಂತಹ ದೂರು ಬಂದಿರುವುದು ನಿಜ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ತಾಕೀತು ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ನಂಬರ್‌ ಪ್ಲೇಟ್‌ ನಾಪತ್ತೆ:ಯೋಗೇಶ್‌ ಅವರು ಬಳಸುತ್ತಿರುವ ಸರ್ಕಾರಿ ವಾಹನ ಮುಂಭಾಗದಲ್ಲಿನ ನೋಂದಣಿ ಸಂಖ್ಯೆಯ ಫಲಕ (ನಂಬರ್‌ ಪ್ಲೇಟ್‌) ಇಲ್ಲದೇ ಸಂಚರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೆಎ–19 ಜಿ–721 (ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹೆಸರಿನಲ್ಲಿ ನೋಂದಣಿಯಾಗಿದೆ) ನೋಂದಣಿ ಸಂಖ್ಯೆಯ ಮಹಿಂದ್ರಾ ಬೊಲೆರೊ ವಾಹನದ ಹಿಂಭಾಗದಲ್ಲಿ ಮಾತ್ರ ನೋಂದಣಿ ಫಲಕ ಇರುವ ಚಿತ್ರಗಳೂ ದೂರಿನ ಜೊತೆ ಜಿಲ್ಲಾಧಿಕಾರಿಯವರನ್ನು ತಲುಪಿವೆ. ಕೇಂದ್ರ ಸ್ಥಾನ ಬಿಟ್ಟು ಹೊರ ಹೋಗಿರುವ ಮಾಹಿತಿ ಹೊರಬರದಂತೆ ತಡೆಯಲು ನೋಂದಣಿ ಫಲಕವನ್ನು ತೆಗೆಯಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯೋಗೇಶ್‌, ‘ನಾನು ಕೇಂದ್ರ ಸ್ಥಾನದಲ್ಲೇ ಇದ್ದೆ. ಆದರೆ, ಯಾರೋ ದುರುದ್ದೇಶದಿಂದ ದೂರು ನೀಡಿದ್ದಾರೆ. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಯವರು ಕರೆ ಮಾಡಿದಾಗ ಉರ್ವದಲ್ಲೇ ಇದ್ದೆ. ನಾನು ಬಳಸುತ್ತಿರುವ ಸರ್ಕಾರಿ ವಾಹನ ಅಪಘಾತಕ್ಕೀಡಾಗಿ ಎದುರಿನ ನಂಬರ್‌ ಪ್ಲೇಟ್‌ಗೆ ಹಾನಿಯಾಗಿತ್ತು. ಅದರ ಚಿತ್ರವನ್ನು ದೂರಿನ ಜೊತೆ ನೀಡಿರಬಹುದು. ಈಗ ವಾಹನಕ್ಕೆ ಹೊಸ ನಂಬರ್‌ ಪ್ಲೇಟ್‌ ಅಳವಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.