ADVERTISEMENT

ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಎಜೆಂಟಾ?: ರಮಾನಾಥ ರೈ ಪ್ರಶ್ನೆ

ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:48 IST
Last Updated 6 ಡಿಸೆಂಬರ್ 2025, 7:48 IST
<div class="paragraphs"><p>ರಮಾನಾಥ ರೈ</p></div>

ರಮಾನಾಥ ರೈ

   

ಮಂಗಳೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ  ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಏಜೆಂಟ್‌ ಎನ್ನುವ ಮೂಲಕ ತಿಳಿಗೇಡಿ ಹೇಳಿಕೆ ನೀಡಿದ್ದಾರೆ.  ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಕುರಿತು ಇಂತಹ ಹಗುರ ಹೇಳಿಕೆ ನೀಡುತ್ತೀರಾದರೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮಿಷನ್ ಏಜೆಂಟಾ ಎಂದು ನಾವೂ ಕೇಳಬೇಕಾಗುತ್ತದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಬಿಹಾರ ಚುನಾವಣೆಯ ಬಳಿಕ ಬಿಜೆಪಿ ನಾಯಕರು ಇಂತಹ ಅಪ್ರಬುದ್ಧ ಹೇಳಿಕೆ ನೀಡುವುದು ಹೆಚ್ಚಾಗಿದೆ’ ಎಂದರು.   

ADVERTISEMENT

‘ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಾಗ ಬಿಜೆಪಿಯವರು ಅದನ್ನು ಬಿಟ್ಟಿಭಾಗ್ಯ ಎಂದು ಹೀಯಾಳಿಸಿದರು. ಅವರೇ, ಬಿಹಾರ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಕುಟುಂಬದ ಮಹಿಳೆಯರ ಖಾತೆಗೆ ₹ 10 ಸಾವಿರ ಹಣ ಹಾಕಿದ್ದಾರೆ. ಈ ರೀತಿ ಆಮಿಷ ಒಡ್ಡಿರುವುದೇ ಬಿಹಾರದಲ್ಲಿ ಅವರು ಗೆಲ್ಲುವುದಕ್ಕೆ ಕಾರಣ’ ಎಂದರು.

‘ಚುನಾವಣಾ ಆಯೋಗದ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನೇ ಹೊರಗಿಡಲಾಗಿದೆ. ಚುನಾವಣಾ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ನಡೆ ಇದು’ ಎಂದರು.  

‘ರಾಜ್ಯದ ಬಿಜೆಪಿ ಮುಖಂಡರು ಸರ್ಕಾರದ ಸಣ್ಣಪುಟ್ಟ ವಿಚಾರಗಳನ್ನು ಟೀಕಿಸಿ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹೇಗೆ ಅಧಿಕಾರ ನಡೆಸಿದ್ದರು ಎಂಬುದು ಜನರಿಗೆ ಗೊತ್ತಿದೆ’ ಎಂದರು.

‘ಸದಾ ಭ್ರಷ್ಟಾಚಾರದಲ್ಲೇ ಮುಳುಗಿದವರು ಮತ್ತೊಬ್ಬರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಆರ್‌.ಅಶೋಕ ಸಾರಿಗೆ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿಗೆ ಸೇರದ್ದ ಜಾಗವನ್ನು ಖಾಸಗಿಯವರಿಗೆ ಮಾರಾಟ‌ ಮಾಡಿದ್ದರು. ಅವರಿಗೆ ಕಾಂಗ್ರೆಸ್‌ ಪಕ್ಷದ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ನಮ್ಮ ಪಕ್ಷದ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ’ ಎಂದರು.  

ಪಕ್ಷದ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್,  ಬೇಬಿ ಕುಂದರ್, ಶುಭೋದಯ ಆಳ್ವ , ಅಪ್ಪಿ, ಕೆ.ಅಶ್ರಫ್, ಪ್ರೇಮ್ ಬಲ್ಲಾಲ್ ಬಾಗ್, ಪದ್ಮನಾಭ್, ಅಶೋಕ್ ಡಿ.ಕೆ, ಶಶಿಧರ ಹೆಗ್ಡೆ ಮೊದಲಾದವರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.