
ಮಂಗಳೂರು: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತಗೊಳಿಸಿದ್ದನ್ನೇ ದೀಪಾವಳಿ ಉಡುಗೊರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಜಿಲ್ಲೆಯ ಕೆಲವು ಬಿಜೆಪಿ ಜನಪ್ರತಿನಿಧಿಗಳು ಕರಪತ್ರ ಮುದ್ರಿಸಿ ಅಂಚೆಯಲ್ಲಿ ಮನೆ ಮನೆಗೆ ಕಳುಹಿಸುತ್ತಿದ್ದಾರೆ. ಜಿಎಸ್‌ಟಿ ಇಳಿಕೆಗೆ ಅವರು ಮಾಡಿರುವ ಹೋರಾಟವಾದರೂ ಏನು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ದುಬಾರಿ ಜಿಎಸ್‌ಟಿ ವಿಧಿಸಿದೆ. ಆಗ ಸೊಲ್ಲೆತ್ತದ ಬಿಜೆಪಿಯ ಜನಪ್ರತಿನಿಧಿಗಳು, ಈಗ ಜಿಎಸ್‌ಟಿ ಇಳಿಕೆ ದೀಪಾವಳಿ ಕೊಡುಗೆ ಎನ್ನುತ್ತಿರುವುದು ನಾಚಿಕೆಗೇಡು. ಕರಪತ್ರವನ್ನೂ ನೇರವಾಗಿ ಜನರಿಗೆ ತಲುಪಿಸಲು ಮುಖವಿಲ್ಲದೇ, ಅಂಚೆ ಮೂಲಕ ಕಳುಹಿಸುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಹೋರಾಟದ ಫಲವಾಗಿ ಕೇಂದ್ರವು ಜಿಎಸ್‌ಟಿ ತೆರಿಗೆ ಇಳಿಕೆ ಮಾಡಿದೆ. ಇದರ ಶ್ರೇಯ ಕಾಂಗ್ರೆಸ್‌ಗೆ ಸಲ್ಲಬೇಕು. ಕೇಂದ್ರವು ರಾಜ್ಯಕ್ಕೆ ₹11,495 ಕೋಟಿ ಜಿಎಸ್‌ಟಿ ಪಾಲನ್ನು ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆಯೂ ಬಿಜೆಪಿಯ ಜನಪ್ರತಿನಿಧಿಗಳು ಮಾತನಾಡಬೇಕು. ಎಂಟು ವರ್ಷಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಎಷ್ಟು. ಅದರಲ್ಲಿ ರಾಜ್ಯದ ಪಾಲೆಷ್ಟು. ಅದನ್ನು ಯಾವುದಕ್ಕೆಲ್ಲ ವಿನಿಯೋಗಿಸಲಾಗಿದೆ. ರಾಜ್ಯಕ್ಕೆ ಕೇಂದ್ರವು ಮಂಜೂರು ಮಾಡಿದ ಯೋಜನೆಗಳು ಯಾವುವು ಎಂಬ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ಹೆದ್ದಾರಿಗಳು ಹದಗೆಟ್ಟಿದ್ದು, ರೈಲ್ವೆ ಕಾಮಗಾರಿಗಳು ಹಳ್ಳ ಹಿಡಿದಿವೆ’ ಎಂದರು.
ಪಕ್ಷದ ಮುಖಂಡರಾದ ಶಶಿಧರ ಹೆಗ್ಡೆ, ಭಾಸ್ಕರ ರಾವ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಮನೀಶ್ ಬೋಳಾರ, ಚಂದ್ರಹಾಸ್ ಪೂಜಾರಿ ಕೋಡಿಕಲ್ ಮೊದಲಾದವರು ಭಾಗವಹಿಸಿದ್ದರು.
Cut-off box - ಪಾಲಿಕೆ ಕಚೇರಿಯಲ್ಲಿ ಸರತಿ ಸಾಲು ಲಾಲ್‌ಬಾಗ್‌ನ ಪಾಲಿಕೆಯ ಕೇಂದ್ರ ಕಚೇರಿಯ ಕಟ್ಟಡದ ಪ್ರವೇಶ ದ್ವಾರದಲ್ಲಿ ಗುರುವಾರ ಸರತಿ ಸಾಲು ಇತ್ತು. ಮೂರು ದಿನಗಳ ದೀಪಾವಳಿ ರಜೆ ಹಾಗೂ ಪಾಲಿಕೆ ಸಿಬ್ಬಂದಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರಿಂದ ಜನನ/ ಮರಣ ಪ್ರಮಾಣಪತ್ರದ ಕೌಂಟರ್ ನಿರ್ವಹಣೆಗೆ ಸಿಬಂದಿ ಕೊರತೆ ಇತ್ತು. ಹಾಗಾಗಿ ಅರ್ಜಿ ಸಲ್ಲಿಸಲು ಬಂದ ಸಾರ್ವಜನಿಕರು ಅರ್ಜಿ ಸಲ್ಲಿಸಲಾಗದೇ ಪ್ರಮಾಣ ಪತ್ರ ಪಡೆಯಲಾಗದೇ ಮರಳಿದ್ದರು. ಹಾಗಾಗಿ ಸಾರ್ವಜನಿಕರು ಹೆಚ್ಚಿನ ಗುರುವಾರ ಸಂಖ್ಯೆಯಲ್ಲಿ ಕಚೇರಿಗೆ ಬಂದಿದ್ದರು. ಕೆಲವು ಹಿರಿಯ ನಾಗರಿಕರೂ ಸಹಿತ ಅರ್ಧ ಗಂಟೆಗೂ ಹೆಚ್ಚು ಸರತಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇತ್ತು. `ಮುಕ್ಕಾಲು ಗಂಟೆ ಕಾದರೂ ನನ್ನ ಸರದಿ ಬಂದಿಲ್ಲ. ಸಿಬ್ಬಂದಿಯೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ’ ಎಂದು ಅರ್ಜಿದಾರರೊಬ್ಬರು ದೂರಿದರು.ಸಾರ್ವಜನಿಕರು ತಾಸುಗಟ್ಟಲೆ ಕಾಯುತ್ತಿರುವ ವಿಷಯ ತಿಳಿದ ಐವನ್ ಡಿಸೋಜ ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಜನರನ್ನು ಕಾಯಿಸುವ ಬದಲು ಟೋಕನ್ ವ್ಯವಸ್ಥೆ ಜಾರಿಗೊಳಿಸುವಂತೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.