ADVERTISEMENT

‘ಜಲಸಿರಿ’ ಯೋಜನೆ 2ನೇ ಬಾರಿ ಉದ್ಘಾಟನೆ: ಲೋಬೊ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:45 IST
Last Updated 14 ಆಗಸ್ಟ್ 2021, 3:45 IST

ಮಂಗಳೂರು: ನಗರ ನೀರು ಸರಬರಾಜು ಯೋಜನೆ ಸಂಬಂಧ ಎಡಿಬಿ ನೆರವಿನ ‘ಜಲಸಿರಿ’ ಯೋಜನೆಗೆ 2019ರಲ್ಲೇ ಚಾಲನೆ ನೀಡಲಾಗಿದೆ. ಎರಡು ವರ್ಷಗಳ ಬಳಿಕ, ಗುರುವಾರ ಸಿಎಂ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಮ್ಮೆ ಇದನ್ನು ಉದ್ಘಾಟಿಸುವ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುವ ಪ್ರಯತ್ನ ನಡೆದಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ಪ್ರಯತ್ನದಿಂದ ಅನುಷ್ಠಾನಗೊಂಡ ಯೋಜನೆಯನ್ನು ಬಿಜೆಪಿ ತನ್ನ ಸಾಧನೆಯೆಂದು ಬಿಂಬಿಸಲು ಹೊರಟಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 2013ರಲ್ಲಿ ಆಗಿನ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರ ಮೂಲಕ ಎಡಿಬಿ ಅಧಿಕಾರಿಗಳ ಜೊತೆ ಮಾತನಾಡಿ ಈ ಸಂಬಂಧ ನವದೆಹಲಿಗೂ ತೆರಳಿದ್ದೆ. ಕೇಂದ್ರ ವಿತ್ತ ಸಚಿವಾಲಯದ ಕಾರ್ಯದರ್ಶಿ ನೆರವು ಪಡೆದು 2016ರಲ್ಲಿ ₹ 587 ಕೋಟಿ ವೆಚ್ಚದ ಜಲಸಿರಿ ಯೋಜನೆಯ ಪ್ರಸ್ತಾವದ ಮಂಜೂರಾತಿ ಪ್ರಕ್ರಿಯೆ ಆರಂಭ ಗೊಂಡಿತು. ಬಳಿಕ ವಿಸ್ತೃತ ಯೋಜನಾ ವರದಿ ತಯಾರಿಸಿ 2019ರಲ್ಲಿ ₹ 1,000 ಕೋಟಿ ವೆಚ್ಚದ ಯೋಜನೆಗೆ ಚಾಲನೆ ದೊರೆತಿದೆ’ ಎಂದರು.

ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ 7 ಮೀಟರ್ ಎತ್ತರದಲ್ಲಿ ನೀರು ನಿಲ್ಲಬೇಕು. ಸುಮಾರು ₹120 ಕೋಟಿ ಪರಿಹಾರ ನೀಡಿ ಮುಳುಗಡೆಯಾಗುವ ರೈತರ ಭೂಮಿ ಪಡೆದುಕೊಳ್ಳಬೇಕು. ಈ ಪ್ರಯತ್ನ ನಡೆದಿಲ್ಲ. ಇದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಮಂಜೂರು ಮಾಡಿಸಿದ್ದರೆ ಸಂತ್ರಸ್ತರಿಗೆ ಅನುಕೂಲವಾಗುತ್ತಿತ್ತು. ಆ ಕೆಲಸದ ಬಗ್ಗೆ ಗಮನಹರಿಸದೆ, ಪ್ರಚಾರಕ್ಕೆ ಮುಖ್ಯಮಂತ್ರಿಯಿಂದ ಯೋಜನೆಯನ್ನು ಎರಡನೇ ಬಾರಿ ಉದ್ಘಾಟಿಸಲಾಗಿದೆ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ದಾಸ್, ಟಿ.ಕೆ.ಸುಧೀರ್, ನೀರಜ್ ಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.