ADVERTISEMENT

ಜಯ–ವಿಜಯ ಜೋಡಕರೆ ಕಂಬಳ ಆರಂಭ

ಕೋಣಗಳ ಒಯ್ಯಾರ, ಓಡಿಸುವವರ ಚಾಕಚಕ್ಯತೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:25 IST
Last Updated 8 ಫೆಬ್ರುವರಿ 2020, 14:25 IST
ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಶನಿವಾರ ನಡೆದ ‘ಜಯ–ವಿಜಯ’ ಜೋಡುಕರೆ ಕಂಬಳದ ರೋಚಕ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ಶನಿವಾರ ನಡೆದ ‘ಜಯ–ವಿಜಯ’ ಜೋಡುಕರೆ ಕಂಬಳದ ರೋಚಕ ದೃಶ್ಯ. ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಮಂಗಳೂರು: ಜೆ.ಜಯ ಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಸ್ಮರಣಾರ್ಥವಾಗಿ ದಶಮಾನೋತ್ಸವದ ಹೊನಲು ಬೆಳಕಿನ ‘ಜಯ-ವಿಜಯ’ ಜೋಡುಕರೆ ಕಂಬಳಕ್ಕಾಗಿ ನೇತ್ರಾವತಿ ನದಿ ತೀರದ ಸುಮಾರು 2 ಎಕರೆ ಪ್ರದೇಶದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ಕೋಣಗಳಿಗೆ ಸ್ನಾನಕ್ಕೆ ನೀರಿನ ವ್ಯವಸ್ಥೆ, ವಿಶ್ರಾಂತಿಗೆ ವ್ಯವಸ್ಥೆ, ಕಂಬಳ ವೀಕ್ಷಣೆಗೆ ವ್ಯವಸ್ಥೆಯೊಂದಿಗೆ ಅಂದಾಜು 100 ಕ್ಕೂ ಅಧಿಕ ಜೋಡಿ ಕಂಬಳದ ಕೋಣಗಳ ನಿರೀಕ್ಷೆಯೊಂದಿಗೆ ಕಂಬಳ ಆರಂಭವಾಯಿತು. ನೇತ್ರಾವತಿ ಹಾಗೂ ಕಡಲ ತೀರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಜಯ– ವಿಜಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಿಗ್ಗೆ ದೇರೆಬೈಲ್ ವಿಠಲದಾಸ್ ತಂತ್ರಿಗಳು ಚಾಲನೆ ನೀಡಿದರು.

‘ಮಂಗಳೂರು ನಗರದ ನಾಲ್ಕೈದು ಸ್ಥಳಗಳಲ್ಲಿ ಕಂಬಳ ನಡೆಯುತ್ತಿದ್ದು, ಅದರಲ್ಲಿ ಜಯ– ವಿಜಯ ಕಂಬಳದ ಮೂಲಕ ಜಪ್ಪಿನಮೊಗರು ಗ್ರಾಮವನ್ನು ಅಂತರ ರಾಷ್ಟ್ರೀಯವಾಗಿ ಗುರುತಿಸಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರಾಯೋಜಿತ ಕಂಬಳಗಳು ನಡೆದರೆ ಜಿಲ್ಲೆಯ ಕಂಬಳಗಳಿಗೆ ಶಕ್ತಿ ನೀಡಿದಂತಾಗುತ್ತದೆ. ಪಿಲಿಕುಳದಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುವ ಕಂಬಳವನ್ನು ಕೂಡಲೇ ಆಯೋಜಿಸಬೇಕು ಎಂದು ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ ಒತ್ತಾಯಿಸಿದರು.

ADVERTISEMENT

ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್, ಪಾಲಿಕೆ ಸದಸ್ಯೆ ವೀಣಾ ಮಂಗಳ ಮಾತನಾಡಿದರು. ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರೋಡಿ, ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ, ಸೂರ್ಯನಾರಾಯಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಪಾಲಿಕೆ ಮಾಜಿ ಸದಸ್ಯ ಸುರೇಂದ್ರ ಜೆ., ಪ್ರಚಾರ ಸಮಿತಿಯ ನಾಗೇಂದ್ರ ಕುಮಾರ್, ಹರಿಯಪ್ಪ ಶೆಟ್ಟಿ, ಮಾಜಿ ಉಪ ಮೇಯರ್ ಜೆ.ಎ.ಸಲೀಂ, ಮೋಹನ್‌ದಾಸ್ ಕಿಲ್ಲೆ, ಭಾಸ್ಕರಚಂದ್ರ ಶೆಟ್ಟಿ, ರಾಜಾನಂದ ರೈ, ವಿಶ್ವನಾಥ ಆಳ್ವ, ಪ್ರವೀಣ್ ಬಜ್ಪೆ, ಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ ಗುಡ್ಡೆಗುತ್ತು ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಚಾರ ಸಮಿತಿಯ ಜೆ.ಸೀತಾರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಶ ಸುವರ್ಣ ನಿರೂಪಿಸಿದರು. ಉಮೇಶ್ ಅತಿಕಾರಿ ವಂದಿಸಿದರು.

ಗಮನ ಸೆಳೆದ ಕಂಬಳ

ತುಳನಾಡಿನ ಜಾನಪದ ಕ್ರೀಡೆಗಳಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕಂಬಳ ಕ್ರೀಡೆಯಲ್ಲಿ ಕೋಣಗಳ ಒಣಪು- ಒಯ್ಯಾರದ ಜತೆಗೆ, ಅದನ್ನು ಓಡಿಸುವವರ ಚಾಕಚಕ್ಯತೆಯೇ ಪ್ರಮುಖ. ನಗರದಲ್ಲಿ ಸದ್ಯ ನಡೆಯುವ ಬೆರಳೆಣಿಕೆಯ ಕಂಬಳಗಳಲ್ಲಿ ಜಪ್ಪಿನಮೊಗರು ಜಯ- ವಿಜಯ ಜೋಡುಕರೆ ಕಂಬಳ ಕೂಡಾ ಒಂದು.

ಜಯ- ವಿಜಯ ಕಂಬಳ ನಡೆಯುತ್ತಿರುವ ಪ್ರದೇಶದ ಪ್ರವೇಶ ದ್ವಾರದಲ್ಲಿ ಹಾಕಲಾಗಿರುವ ಕಂಬಳ ಓಡಿಸುವ ಸ್ತಬ್ಧ ಚಿತ್ರ ಗಮನ ಸೆಳೆಯುತ್ತಿದೆ. ಕಂಬಳ ಓಡಿಸುವ ವ್ಯಕ್ತಿಯ ಜತೆಗೆ ಕಂಬಳದಲ್ಲಿ ಓಡುತ್ತಿರುವ ಕೋಣಗಳು, ಅವುಗಳ ಮೇಲೆ ಕಾರಂಜಿಯಿಂದ ಸಿಂಚನಗೊಳ್ಳುತ್ತಿರುವ ನೀರು ನೋಡುಗರಿಗೆ ಕಂಬಳದ ಶ್ರೀಮಂತಿಕೆಯನ್ನು ಸಾರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.