ಕಡಬ (ಉಪ್ಪಿನಂಗಡಿ): ಮೀಸಲು ಅರಣ್ಯದ ಸಮರ್ಪಕ ಗಡಿ ಗುರುತು ಆಗದೆ ಸಾರ್ವಜನಿಕರಿಗೆ ಹಾಗೂ ಇತರ ಇಲಾಖೆಯ ಅಭಿವೃದ್ದಿ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಯಬೇಕು ಎಂದು ಕಡಬ ತಾಲ್ಲೂಕು ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
ಮೀಸಲು ಅರಣ್ಯ ಎಂದು ಆರ್‌ಟಿಸಿಯಲ್ಲಿ ನಮೂದಾಗಿರುವುದರಿಂದ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲು ಅರಣ್ಯ ಇಲಾಖೆಯಿಂದ ಕಷ್ಟವಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೆಲವು ಕಡೆ ಕಾಮಗಾರಿ ನಡೆಸಲು ತೊಡಕು ಉಂಟಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸವಣೂರು ಭಾಗದಲ್ಲಿ ರಸ್ತೆ ಚರಂಡಿ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡುತ್ತಿದ್ದಾರೆ. ಇದು ಬೆಳೆದು ದೊಡ್ಡದಾಗುತ್ತಾ ವಾಹನ ಸಂಚಾರಕ್ಕೆ ತೊಂದರೆ ಆಗುತ್ತದೆ. ಪೆರಿಯಶಾಂತಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳಿದ್ದರೂ ಅರಣ್ಯ ಇಲಾಖೆ ತೆರವುಗೊಳಿಸಿಲ್ಲ ಎಂಬ ದೂರು ಸಭೆಯಲ್ಲಿ ವ್ಯಕ್ತವಾಯಿತು.
ಶಾಸಕಿ ಮಾತನಾಡಿ, ‘ಅರಣ್ಯ ಇಲಾಖೆಯವರಿಗೆ ಅವರ ಜಾಗ ಎಲ್ಲಿ ಇದೆ ಎಂದು ಗೊತ್ತಿಲ್ಲ’ ಎಂದು ಹೇಳಿದರು.
ಪುತ್ತೂರು ಆರ್‌ಎಫ್‌ಒ ಕಿರಣ್ ಪ್ರತಿಕ್ರಿಯಿಸಿ, ‘ನೀವು ಹಾಗೆ ಹೇಳಬೇಡಿ; ನಮಗೆ ಅರಣ್ಯ ಇಲಾಖೆಯ ಜಾಗ ಎಲ್ಲಿದೆ ಎಂದು ಗೊತ್ತಿದೆ’ ಎಂದರು.
ಮೀಸಲು ಅರಣ್ಯದ ಸರಿಯಾದ ಗಡಿ ಗುರುತು ಆದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಬೇಕು ಎಂದು ನಿರ್ಣಯಿಸಲಾಯಿತು.
ತಹಶೀಲ್ದಾರ್ ಗೈರು, ಆಕ್ಷೇಪ: ಸಭೆಗೆ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಗೈರಾಗಿದ್ದರು.
ಮಾಹಿತಿ ನೀಡಲು ಕಂದಾಯ ಇಲಾಖೆ ಸಿಬ್ಬಂದಿ ಬಂದಿದ್ದರು. ಈ ಬಗ್ಗೆ ಸದಸ್ಯರು ಆಕ್ಷೇಪಿಸಿ ಅಗತ್ಯ ಇರಬೇಕಾದ ತಹಶೀಲ್ದಾರ್ ಸಭೆಗೆ ಗೈರಾದರೆ ಕಂದಾಯ ಇಲಾಖೆಯ ಸಮಸ್ಯೆಯನ್ನು ಯಾರಲ್ಲಿ ಹೇಳುವುದು ಎಂದು ಪ್ರಶ್ನಿಸಿದರು.
ತುರ್ತುಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿರುವುದರಿಂದ ಅವರು ಬಂದಿಲ್ಲ ಎಂದು ಸಿಬ್ಬಂದಿ ಹೇಳಿದರು.
ಕಡಬ ತಾಲ್ಲೂಕು ಅಭಿವೃದ್ಧಿ ಆಗಲು ಹಲವು ಕೆಲಸಗಳು ಕಂದಾಯ ಇಲಾಖೆಯಿಂದ ಆಗಬೇಕಿದೆ. ಕ್ರೀಡಾಂಗಣ ನಿರ್ಮಾಣ, ಹೆಲಿಪ್ಯಾಡ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ಕೆಲವು ಇಲಾಖೆಗಳಿಗೆ ಜಾಗ ನೀಡಬೇಕಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್, ಕೆಡಿಪಿ ಸದಸ್ಯರಾದ ಶಿವರಾಮ ರೈ, ಪದ್ಮನಾಭ ಸಿರಿಬಾಗಿಲು, ಉಷಾ ಜೋಯಿ ನೆಲ್ಯಾಡಿ, ಮೋನಪ್ಪ ಕೊಯಿಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿವಾರ್ಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವ್ಯವಸ್ಥಾಪಕ ಭುವನೇಂದ್ರ ಕುಮಾರ್ ವಂದಿಸಿದರು. ವೆಂಕಟ್ರಮಣ ಗೌಡ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.