ADVERTISEMENT

ಹರಿನಾರಾಯಣ ಬೈಪಾಡಿತ್ತಾಯರಿಗೆ ಕಡಬ ನಾರಾಯಣಾಚಾರ್ಯ ಸಂಸ್ಮರಣಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 10:34 IST
Last Updated 28 ನವೆಂಬರ್ 2020, 10:34 IST
   

ಮಂಗಳೂರು: ಪ್ರಸಕ್ತ ಸಾಲಿನ ‘ಕಡಬ ಸಂಸ್ಮರಣಾ ಪ್ರಶಸ್ತಿ‘ಯನ್ನು ಹಿರಿಯ ಮದ್ದಳೆಗಾರ ಮಂಗಳೂರಿನ ಬಜ್ಪೆ ನಿವಾಸಿ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೆಂಕುತಿಟ್ಟಿನ ತಿರುಗಾಟದ ಮೇಳಗಳಲ್ಲಿ ಹಿಮ್ಮೇಳವಾದಕರಾಗಿ ಮೂರು ದಶಕಗಳ ಕಾಲ ಕಲಾ ಸೇವೆ ಮಾಡಿ ಮೃತರಾದ ಕಡಬದ ನಾರಾಯಣ ಆಚಾರ್ಯ ಮತ್ತು 34ನೇ ವಯಸ್ಸಿಗೆ ಮೃತಪಟ್ಟ ಅವರ ಪುತ್ರ, ಪ್ರಸಿದ್ಧ ಹಿಮ್ಮೇಳ ಕಲಾವಿದ ವಿನಯ ಆಚಾರ್ಯ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ನಾರಾಯಣ ಆಚಾರ್ಯ ಅವರ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎಂದರು.

‘ದಿವಂಗತರಾದ ಇಬ್ಬರು ಕಲಾವಿದರ ಹೆಸರು ಮತ್ತು ಪ್ರತಿಭೆಯನ್ನು ಜನಮಾಸದಲ್ಲಿ ಉಳಿಸುವ ಉದ್ದೇಶದಿಂದ ಸಮಿತಿ ರಚಿಸಲಾಗಿದ್ದು, ಪ್ರತಿ ವರ್ಷ ಹಿಮ್ಮೇಳ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಈ ಮೂಲಕ ಕಡಬ ಯಕ್ಷ ಪರಂಪರೆಯನ್ನು ಉಳಿಸಿ, ಬೆಳೆಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಕೋವಿಡ್‌–19 ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ಬದಲಿಗೆ, ಡಿ.6ರಂದು ಮಧ್ಯಾಹ್ನ 2:30ರಿಂದ ಸಂಜೆ 5:30ರವರೆಗೆ ನಮ್ಮ ಕುಡ್ಲ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ‘ಯಕ್ಷಗಾನ ಸ್ವರಾಭಿಷೇಕ’ ನೇರ ಪ್ರಸಾರ ಇರುತ್ತದೆ’ ಎಂದು ಸುಂದರ ಆಚಾರ್ಯ ಹೇಳಿದರು.

ಸಮಿತಿಯ ಕೋಶಾಧಿಕಾರಿ ಭಾಸ್ಕರ ಆಚಾರ್ಯ, ಕಾರ್ಯದರ್ಶಿ ಗಿರೀಶ್‌ ಕಾವೂರು, ಸದಸ್ಯ ವಾದಿರಾಜ ಕಲ್ಲೂರಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.