ADVERTISEMENT

ಕಲಾಪರ್ಬದಲ್ಲಿ ಕಲಾಕೃತಿಗಳ ಮೆರವಣಿಗೆ

ಛಾಯಾಚಿತ್ರ, ಪೇಂಟಿಂಗ್ ಪ್ರದರ್ಶನ, ಕ್ಯಾರಿಕೇಚರ್ ದರ್ಶನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:29 IST
Last Updated 10 ಜನವರಿ 2026, 7:29 IST
 ಕದ್ರಿ ಉದ್ಯಾನದಲ್ಲಿ ಆರಂಭವಾದ ಕಲಾಪರ್ಬದಲ್ಲಿ ಕುಂಚದಲ್ಲಿ ಮೊಗವರಳಿಸಿದ ಕಲಾವಿದ : ಪ್ರಜಾವಾಣಿ ಚಿತ್ರ 
 ಕದ್ರಿ ಉದ್ಯಾನದಲ್ಲಿ ಆರಂಭವಾದ ಕಲಾಪರ್ಬದಲ್ಲಿ ಕುಂಚದಲ್ಲಿ ಮೊಗವರಳಿಸಿದ ಕಲಾವಿದ : ಪ್ರಜಾವಾಣಿ ಚಿತ್ರ    

ಮಂಗಳೂರು: ಮುಸ್ಸಂಜೆಯ ಹಿತವಾದ ತಂಗಾಳಿ, ಬಾನ ದಾರಿಯಲ್ಲಿ ಸೂರ್ಯ ಜಾರುತ್ತಿದ್ದಂತೆ ಕದ್ರಿ ಉದ್ಯಾನದಲ್ಲಿ ಕಲೆ, ಕುಂಚ, ಕಲಾಕೃತಿಗಳ ಸೊಬಗು ರಂಗೇರಿತ್ತು. 

ಅರ್ಕ್ಯಾಲಿಕ್, ಆಯಿಲ್ ಪೇಂಟ್‌, ವಾಟರ್‌ ಪೇಂಟ್‌ಗಳಲ್ಲಿ ಅರಳಿದ ಕಲಾಕೃತಿಗಳ ಹೊಳಪಿನಲ್ಲಿ ಉದ್ಯಾನದ ಮರಗಳು ತಮ್ಮ ಪ್ರತಿಬಿಂಬ ನೋಡಿಕೊಂಡು ನಸುನಗುತ್ತಿದ್ದವು. ಕೈಯಲ್ಲಿ ಕುಂಚ ಹಿಡಿದ ಕಲಾವಿದರು ತಮ್ಮೆದುರು ಧ್ಯಾನಸ್ಥರಾಗಿ ಕುಳಿತ ವ್ಯಕ್ತಿಗಳ ಪಡಿಯಚ್ಚನ್ನು ಬಿಳಿ ಹಾಳೆ ಮೇಲೆ ಮೂಡಿಸುತ್ತಿದ್ದರು. ದಾರಿಹೋಕರು, ಉದ್ಯಾನಕ್ಕೆ ನಿತ್ಯ ವಾಕಿಂಗ್ ಬರುವವರು ತುಸು ನಿಂತು, ಈ ದೃಶ್ಯವನ್ನು ಕಂಗಳಲ್ಲಿ ತುಂಬಿಕೊಂಡರು.

ಜಿಲ್ಲಾಡಳಿತವು ಕರಾವಳಿ ಉತ್ಸವದ ಅಂಗವಾಗಿ ಶರಧಿ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರದಿಂದ ಮೂರು ದಿನ ಆಯೋಜಿಸಿರುವ ಕಲಾಪರ್ಬವು ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. 

ADVERTISEMENT

ವ್ಯಂಗ್ಯಚಿತ್ರಗಳು, ಕ್ಯಾರಿಕೇಚರ್, ಶಿಲ್ಪ ಕಲಾಕೃತಿಗಳು, ಬಗೆಬಗೆಯ ವರ್ಣಚಿತ್ರ ಸಂತೆಯು ನೋಡುಗರನ್ನು ಕಲಾ ಪ್ರಪಂಚಕ್ಕೆ ಬರಸೆಳೆಯುವಂತಿವೆ. ರಾಷ್ಟ್ರ ಮಟ್ಟದ ಚಿತ್ರ- ಶಿಲ್ಪ-ಸಾಂಸ್ಕೃತಿಕ ಮೇಳ ‘ಕಲಾ ಪರ್ಬ’ವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಶುಕ್ರವಾರ ಸಂಜೆ ಉದ್ಘಾಟಿಸಿದರು. 

ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜ, ಜಿಲ್ಲಾಧಿಕಾರಿ ದರ್ಶನ್‌ ಎಚ್.ವಿ., ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ಚಿತ್ರ ಕಲಾವಿದ ಗಣೇಶ್‌ ಸೋಮಾಯಾಜಿ, ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್, ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ, ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿಪ್ರಸಾದ್ ಆಳ್ವ, ಉಪಾಧ್ಯಕ್ಷ ಶರತ್ ಹೊಳ್ಳ, ಭರತ್ ರಾಜ್ ಬೈಕಾಡಿ, ಜಿನೇಶ್ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು. 

ಜ.10 ಮತ್ತು 11ರಂದು ಬೆಳಿಗ್ಗೆ 9ರಿಂದ ರಾತ್ರಿ 9.30ರವರಗೆ ‘ಕಲಾಪರ್ಬ’ ನಡೆಯಲಿದ್ದು, ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಜ.10ರಂದು ಬೆಳಿಗ್ಗೆ 11ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಕೊಳಲು ವಾದನ, ಸಾಧಕ ಕಲಾವಿದರಿಗೆ ಸನ್ಮಾನ, ಸಾನಿಧ್ಯ ವಿಶೇಷ ಮಕ್ಕಳಿಂದ ಯಕ್ಷಗಾನ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 100ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.

 ಕದ್ರಿ ಉದ್ಯಾನದ ಕಲಾಪರ್ಬದಲ್ಲಿ ಚಿತ್ರಸಂತೆ ವೀಕ್ಷಿಸುತ್ತಿರುವ ನೋಡುಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.