ಕಂಬಳ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಲಾ 10 ಕಂಬಳಗಳಿಗೆ ತಲಾ ₹2 ಲಕ್ಷದಂತೆ ಒಟ್ಟು ₹20 ಲಕ್ಷ ಮಂಜೂರುಗೊಳಿಸಿ ಸರ್ಕಾರ ಆದೇಶಿಸಿದೆ. ಎಲ್ಲ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸರ್ಕಾರ ಕಂಬಳಕ್ಕೆ ಯಾಕೆ ಈ ರೀತಿ ತಾರತಮ್ಯ ಮಾಡುತ್ತಿದೆ. ಸರ್ಕಾರ ಈ ನಿರ್ಧಾರವನ್ನು ಪುನರ್ ವಿಮರ್ಶಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಎರಡು ವರ್ಷಗಳಲ್ಲಿ ಕಂಬಳಕ್ಕೆ ಸರ್ಕಾರದಿಂದ ಯಾವುದೇ ಅನುದಾನ ದೊರೆತಿಲ್ಲ. ಈ ವರ್ಷ ಒಂದು ಕಂಬಳಕ್ಕೆ ಕೇವಲ ₹2 ಲಕ್ಷ ಮಂಜೂರುಗೊಳಿಸಿ ಆದೇಶಿಸಿರುವುದು ವಿಪರ್ಯಾಸ. ಹಿಂದೆ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ 20 ಕಂಬಳಕ್ಕೆ ತಲಾ ₹5 ಲಕ್ಷದಂತೆ ಒಟ್ಟು ₹1 ಕೋಟಿ ಬಿಡುಗಡೆ ಆಗಿತ್ತು. ನಂತರ ಯೋಗೇಶ್ವರ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಒಂದು ಕಂಬಳಕ್ಕೆ ತಲಾ ₹5 ಲಕ್ಷ, 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಒಂದು ಕಂಬಳಕ್ಕೆ ತಲಾ ₹5 ಲಕ್ಷ ಬಿಡುಗಡೆ ಆಗಿತ್ತು. ಆದರೆ, ಈ ವರ್ಷ ರೈತಾಪಿ ವರ್ಗದವರು ನಡೆಸುವ ಕಂಬಳಕ್ಕೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳಿದ್ದಾರೆ.
ಕಂಬಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಪೀಕರ್‌ಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಒಂದು ಕಂಬಳ ನಡೆಸಲು ಆಯೋಜಕರಿಗೆ ₹25 ಲಕ್ಷದಿಂದ ₹40 ಲಕ್ಷದವರೆಗೆ ಖರ್ಚಾಗುತ್ತದೆ. ರಾಜ್ಯ ಸರ್ಕಾರ ಅನುದಾನ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದಲ್ಲಿ ಉಭಯ ಜಿಲ್ಲೆಗಳ ಕಂಬಳ ಸಮಿತಿ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು 24 ಕಂಬಳಗಳಿಗೆ ತಲಾ ₹5 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾಡಿದ ವಿನಂತಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಅನುದಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಶಾಸಕರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರಿಗೆ ಪತ್ರ ಬರೆದು ವಿನಂತಿಸಿದ್ದು, ಸಚಿವರು ತಲಾ ₹5 ಲಕ್ಷ ನೀಡುವಂತೆ 2024 ಡಿ. 19ರಂದು ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.