
ಮಂಗಳೂರು: ರಾತ್ರಿ ವೇಳೆ ಕಂಬಳ, ಯಕ್ಷಗಾನ ಹಾಗೂ ಜಾತ್ರೆ ಆಚರಣೆಗಳಿಗೆ ಅಡ್ಡಿಪಡಿಸುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕು ಎಂದೂ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು.
‘ಧ್ವನಿವರ್ಧಕ ಬಳಕೆಯ ನೆಪ ಹೇಳಿ ರಾತ್ರಿ ವೇಳೆ ಕಂಬಳಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು’ ಎಂದು ಶಾಸಕ ಅಶೋಕ್ ಕುಮಾರ್ ರೈ ಒತ್ತಾಯಿಸಿದರು.
‘ರಾತ್ರಿ ವೇಳೆ ನಡೆಯುವ ಜಾತ್ರೆಗಳಿಗೂ ಅಡ್ಡಿಪಡಿಸಬಾರದು ಎಂದು ಶಾಸಕಿ ಭಾಗಿರಥಿ ಮುರುಳ್ಯ ಒತ್ತಾಯಿಸಿದರು.
ಯಕ್ಷಗಾನಕ್ಕೆ ಅಡ್ಡಿಪಡಿಸಿ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟುಮಾಡಬೇಡಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಕೋರಿದರು.
‘ಜಿಲ್ಲಾಡಳಿತವು ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸ್ಪಷ್ಟಪಡಿಸಿದರು.
ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಕಂಬಳ, ಯಕ್ಷಗಾನ ಆಯೋಜಿಸಿದರೆ, ಅನುಮತಿ ನೀಡಲು ಅಡ್ಡಿ ಇಲ್ಲ. ಸ್ಥಳೀಯರಿಂದ ದೂರು ಬಂದಾಗ ಮಾತ್ರ ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದರು.
ಪುತ್ತೂರಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಟ್ರ್ಯಾಕ್ ನಿರ್ಮಾಣಕ್ಕೆ ₹ 9 ಕೋಟಿ ಮಂಜೂರಾಗಿ ವರ್ಷವಾಗಿದೆ. ಸಾಮಾಜಿಕ ಅರಣ್ಯ ವಿಭಾಗದವರು ಮರಗಳನ್ನು ತೆರವುಗೊಳಿದೇ ಅನುದಾನ ಹಿಂದಕ್ಕೆ ಹೋಗುವ ಸ್ಥಿತಿ ಎದುರಾಗಿದೆ ಎಂದು ಶಾಸಕ ಅಶೋಕ್ ರೈ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಅರಣ್ಯದಲ್ಲಿ ಕಾಟು ಗಿಡಗಳ ಬದಲು, ಹಣ್ಣು ಹಂಪಲುಗಳ ಗಿಡಗಳನ್ನೇ ಬೆಳೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಹೊಸ ಬ್ಲಾಕ್‌ನಲ್ಲಿ 76 ಹೊಸ ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ತಿಳಿಸಿದರು.
ಬೆಳೆ ಸಂರಕ್ಷಣೆಗಾಗಿ ಕೋವಿ ಪರವಾನಗಿ ಪಡೆದ ವ್ಯಕ್ತಿ ಮೃತಪಟ್ಟಾಗ, ಅವರ ಮಕ್ಕಳಲ್ಲಿ ಒಬ್ಬರಿಗೆ ಪರವಾನಗಿ ವರ್ಗಾಯಿಸಲು ಪೊಲೀಸ್ ಇಲಾಖೆ ಮೀನಮೇಷ ಎಣಿಸುತ್ತಿದೆ ಎಂದು ಶಾಸಕ ಅಶೋಕ್ ರೈ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಆರೋಪಿಸಿದರು.
ಅರ್ಹ ಕೃಷಿಕರಿಗೆ ಪರವಾನಗಿ ವರ್ಗಾಯಿಸಲು ಅಡ್ಡಿ ಇಲ್ಲ. ಜಿಲ್ಲೆಯಲ್ಲಿ 25 ಸಾವಿರ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿದೆ. ಹಾಗಾಗಿ ಪರವಾನಗಿ ವರ್ಗಾವಣೆ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮವಹಿಸಲಾಗುತ್ತಿದೆ ಎಂದು ಎಸ್.ಪಿ ಡಾ.ಅರುಣ್ ತಿಳಿಸಿದರು.
ಅವಧಿ ಮೀರಿದ ಔಷಧಿ ಪೂರೈಕೆ:
ಜಿಲ್ಲೆಯ ಆಯುಷ್ ಆಸ್ಪತ್ರೆಗೆ ಚಿಕ್ಕಮಗಳೂರು, ಹಾಸನದಿಂದ ಅವಧಿ ಮೀರಿದ ಔಷಧಿಗಳನ್ನು ತರಿಸಿ ರೋಗಿಗಳಿಗೆ ನೀಡಲಾಗುತ್ತಿದೆ. ಇದಕ್ಕಾಗಿಯೇ ಇಬ್ಬರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪುರಾವೆಗಳನ್ನು ಜಿಲ್ಲಾಧಿಕಾರಿಗೆ ನೀಡಿದರೂ ಕ್ರಮವಾಗಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ದೂರಿದರು.
ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಅನುಮತಿ ಪಡೆಯದೇ ಗೈರಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ ನರ್ವಾಡೆ ಕೆ. ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ನೋಟಿಸ್ ನೀಡಿ ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು.
ಮೆಸ್ಕಾಂ ಎಂಡಿ ಗೈರು:
ಕೆಡಿಪಿ ಸಭೆಗೆ ಗೈರಾದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟೀಸ್ ನೀಡುವಂತೆ ಸಚಿವರು ಸೂಚಿಸಿದರು.
ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ನವೀಕರಣಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಈ ಪ್ರವೃತ್ತಿ ಮುಂದುವರಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಲು ಜನ ಹಿಂದೇಟು ಹಾಕುತ್ತಾರೆ ಎಂದು ಶಾಸಕ ರಾಜೇಶ್ ನಾಯ್ಕ ಉಳಿಪಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರಳ್ಯ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಪ್ರತಾಪಸಿಂಹ ನಾಯಕ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್, ಉಪಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೊನಿ ಮರಿಯಪ್ಪ ಮೊದಲಾದವರು ಭಾಗವಹಿಸಿದ್ದರು.
ಕೆಂಪುಕಲ್ಲು– ಪರವಾನಗಿ ಹೆಚ್ಚಿಸಲು ಒತ್ತಾಯ
ಕೆಂಪುಕಲ್ಲು ಗಣಿಗಾರಿಕೆ ಮೇಲಿನ ರಾಜಧನ ಕಡಿತದ ಬಳಿಕವೂ ದರ ಕಡಿಮೆ ಆಗದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ‘ಕೆಂಪುಕಲ್ಲು ತೆಗೆಯುವವರು ಪ್ರತಿ ಕಲ್ಲಿಗೆ ₹ 28ರಿಂದ ₹ 30ರಷ್ಟು ದರವನ್ನು ಮಾತ್ರ ವಿಧಿಸುತ್ತಿದ್ದಾರೆ. ಆದರೆ ಲಾರಿಯವರು ಗ್ರಾಹಕರಿಂದ ಹೆಚ್ಚು ದರ ವಸೂಲಿ ಮಾಡುತ್ತಿದ್ದಾರೆ. ಪರವಾನಗಿ ಸಂಖ್ಯೆ ಹೆಚ್ಚಿಸಿದರೆ ದರವೂ ಕಡಿಮೆಯಾಗಲಿದೆ’ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ತಿಳಿಸಿದರು. ‘ಅರ್ಜಿ ಹಾಕಿದವರಲ್ಲಿ ಅರ್ಹರಿಗೆಲ್ಲ ಪರವಾನಗಿ ನೀಡುತ್ತಿದ್ದೇವೆ. ಮೂರು ತಿಂಗಳಲ್ಲಿ 59 ಪರವಾನಗಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು. ‘ಜಿಲ್ಲೆಯಲ್ಲಿ ಒಟ್ಟು 28 ಎಕರೆ 93 ಸೆಂಟ್ಸ್ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹೊಸತಾಗಿ 29 ಅರ್ಜಿಗಳು ಬಂದಿವೆ. ಈ ವಾರ ಜಂಟಿ ಸರ್ವೆ ಮುಗಿಸಿ 10 ದಿನಗಳಲ್ಲಿ ಪರವಾನಗಿ ನೀಡುತ್ತೇವೆ’ ಎಂದು ಇಲಾಖೆಯ ಹಿರಿಯ ಭೂವಿಜ್ಞಾನಿ ಮಾಹಿತಿ ನೀಡಿದರು.
‘ಬೀದಿನಾಯಿ ಪುನರ್ವಸತಿ– ಜಾಗ ಗುರುತಿಸಿ’
‘ಈಗ ಬೀದಿ ನಾಯಿಗಳಿಗಾಗಿ ಆಶ್ರಯತಾಣ ನಿರ್ಮಿಸಿ ಪುನರ್ವಸತಿ ಕಲ್ಪಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಬೀದಿ ನಾಯಿಗಳ ಪುನರ್ವಸತಿಗೆ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಜಾಗ ನಿಗದಿಪಡಿಸಬೇಕು’ ಎಂದು ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದರು. ಕುಂಪಲದಲ್ಲಿ ಬೀದಿ ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದನ್ನು ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. ‘ಬೀದಿನಾಯಿಗಳ ಪುನರ್ವಸತಿಗೆ ಸದ್ಯಕ್ಕೆ ಜಾಗ ಲಭ್ಯವಿಲ್ಲ. ನಾಯಿ ಕಡಿತಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ₹ 5 ಸಾವಿರ ಪರಿಹಾರ ನೀಡಲಾಗುತ್ತದೆ. ನಾಯಿ ಕಡಿತಕ್ಕೊಳಗಾದವರು ಸತ್ತರೆ ಸಂತ್ರಸ್ತ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲು ಅವಕಾಶ ಇದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.