ADVERTISEMENT

ಕಾಣಿಯೂರು: ಹಲ್ಲೆಗೊಳಗಾದ ಯುವಕರಿಗೆ ಮುಸ್ಲಿಂ ಸೆಂಟ್ರಲ್‌ ಕಮಿಟಿ ಸಾಂತ್ವನ

ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಸ್ಲಿಂ ಸೆಂಟ್ರಲ್‌ ಕಮಿಟಿ ನಿಯೋಗ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 5:02 IST
Last Updated 23 ಅಕ್ಟೋಬರ್ 2022, 5:02 IST
ಹಲ್ಲೆಗೊಳಗಾದ ಯುವಕನನ್ನು ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಪ್ರಮುಖರು ನಗರದ ಆಸ್ಪತ್ರೆಯಲ್ಲಿ ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ಇಬ್ರಾಹಿಂ ಕೋಡಿಜಾಲ್‌, ಡಿ.ಎಂ.ಅಸ್ಲಂ ಹಾಗೂ ಇತರರು ಇದ್ದಾರೆ
ಹಲ್ಲೆಗೊಳಗಾದ ಯುವಕನನ್ನು ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಪ್ರಮುಖರು ನಗರದ ಆಸ್ಪತ್ರೆಯಲ್ಲಿ ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ಇಬ್ರಾಹಿಂ ಕೋಡಿಜಾಲ್‌, ಡಿ.ಎಂ.ಅಸ್ಲಂ ಹಾಗೂ ಇತರರು ಇದ್ದಾರೆ   

ಮಂಗಳೂರು: ಬೆಡ್ ಶೀಟ್ ಮಾರಾಟಕ್ಕೆ ತೆರಳಿದ್ದ ಮಹಮ್ಮದ್ ರಫೀಕ್ ಮತ್ತು ರಮೀಜುದ್ದೀನ್ ಅವರ ಮೇಲೆ ಕಡಬ ತಾಲ್ಲೂಕಿನ ಕಾಣಿಯೂರಿನಲ್ಲಿ ಬರ್ಬರವಾಗಿ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿರುವುದು ಖಂಡನೀಯ ಎಂದು ಮುಸ್ಲಿಂ ಸೆಂಟ್ರಲ್‌ ಕಮಿಟಿ ಹೇಳಿದೆ.

ನಗರದ ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕರನ್ನು ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನೇತೃತ್ವದ ನಿಯೋಗವು ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು.

‘ಹಲ್ಲೆ ನಡೆಸಿದವರು ಯುವಕರ ಕಾರನ್ನು ಜಖಂಗೊಳಿಸಿದ್ದಲ್ಲದೇ, ಅದರಲ್ಲಿದ್ದ ಬೆಡ್ ಶೀಟ್‌ಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಯುವಕರಿಗೆ ₹ 2 ಲಕ್ಷ ನಷ್ಟ ಉಂಟಾಗಿದೆ’ ಎಂದೂ ಕಮಿಟಿ ಆರೋಪಿಸಿದೆ.

ADVERTISEMENT

ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕಮಿಟಿಯು ಒತ್ತಾಯಿಸಿದೆ.

ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಅಹ್ಮದ್ ಬಾವ ಬಜಾಲ್, ಅಹ್ಮದ್ ಬಾವ ಪಡೀಲ್, ಡಿ.ಎಂ. ಅಸ್ಲಂ, ಮೊಯ್ದಿನ್ ಮೊನು, ಎಂ.ಎ. ಅಶ್ರಫ್, ಮೊಹಮ್ಮದ್ ಬಪ್ಪಳಿಗೆ, ಸಿ.ಎಂ ಹನೀಫ್, ರಿಯಾಜುದ್ದೀನ್, ಎನ್.ಕೆ. ಅಬೂಬಕ್ಕರ್ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.