ADVERTISEMENT

ದ.ಕನ್ನಡ ಸಾಹಿತ್ಯ ಸಮ್ಮೇಳನ: ‘ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಕನ್ನಡ ಸಾಹಿತ್ಯ’

ಸರ್ವಾಧ್ಯಕ್ಷ ಪ್ರಭಾಕರ ಶಿಶಿಲ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 13:28 IST
Last Updated 21 ಫೆಬ್ರುವರಿ 2025, 13:28 IST
<div class="paragraphs"><p>ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತಿ ಬಿ. ಪ್ರಭಾಕರ ಶಿಶಿಲ</p></div>

ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತಿ ಬಿ. ಪ್ರಭಾಕರ ಶಿಶಿಲ

   

ಪ್ರಜಾವಾಣಿ ಚಿತ್ರ

ಮಂಗಳೂರು: ಪಂಪನ ಕಾಲದಿಂದ ಆಧುನಿಕ ಸಂದರ್ಭದ ವರೆಗೂ ಕನ್ನಡ ಸಾಹಿತ್ಯ ನಿರಂತರವಾಗಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು.

ADVERTISEMENT

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಕಟ್ಟುವ ಸಾಹಿತ್ಯ ಮತ್ತು ಹುಟ್ಟುವ ಸಾಹಿತ್ಯ ವಿಭಿನ್ನ. ‘ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ..’ ಎಂದು ಸಾಗುವ ಕುಮಾರವ್ಯಾಸನ ಕಾವ್ಯ ಹುಟ್ಟುವ ಸಾಹಿತ್ಯಕ್ಕೆ ತಾಜಾ ಉದಾಹರಣೆ.  ಒಟ್ಟಾರೆಯಾಗಿ ಕನ್ನಡ ಸಾಹಿತ್ಯದಲ್ಲಿ ವೈಚಾರಿಕೆ ಚಿಂತನೆ ನಿರಂತರವಾಗಿ ನಡೆದಿದೆ ಎಂದರು.

‘ಪಂಪನು ತನ್ನ ಕೃತಿಯಲ್ಲಿ ಲೌಕಿಕ ಮತ್ತು ಜಿನಾಗಮದ ಬಗ್ಗೆ ಪ್ರಸ್ತಾಪಿಸಿದ್ದು ಕುಲದ ಬಗ್ಗೆಯೂ ಮಾತನಾಡಿದ್ದಾನೆ. ನಿಜವಾದ ಮನುಷ್ಯನೆಂದರೆ ಯಾರು ಎಂಬುದನ್ನೂ ಹೇಳಿದ್ದಾನೆ. ಪಂಪನ‌ ನಂತರ ಬಸವಣ್ಣನೂ ವ್ಯವಸ್ಥೆಯನ್ನು ವಿರೋಧಿಸಿದ್ದ. ಕನಕದಾಸರು ಕುಲ‍ಪ್ರತಿಷ್ಠೆಯ ಹಮ್ಮನ್ನು ಧಿಕ್ಕರಿಸಿದರು. ನೂರು ದೇವರನೆಲ್ಲ ನೂಕಾಚೆ ದೂರ ಎಂದು ಕುವೆಂಪು ಹೇಳಿದರೆ ಬಾಳ್ವೆಯೇ ಬೆಳಕು ಬೇರೆ ದೇವರಿಲ್ಲ ಎಂದು ಶಿವರಾಮ ಕಾರಂತ, ಎಲ್ಲೋ ಹುಡುಕಿದೆ ಇಲ್ಲದ ದೇವರ ಎಂದು ಜಿಎಸ್‌ಎಸ್ ಕಲ್ಲದೇವರ ಎಲ್ಲಿ ಕೂರಿಸಿದರೇನು ಎಂದು  ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಬಂಡಾಯ, ದಲಿತ ಸಾಹಿತಿಗಳೂ ವ್ಯವಸ್ಥೆಯ ವಿರುದ್ಧ ಬರೆದರು’ ಎಂದು ಪ್ರಭಾಕರ ಶಿಶಿಲ ಹೇಳಿದರು.

‘ದೇಶದಲ್ಲಿ ಕೋಮುವಾದ ಬೆಳೆಯಲು ತೊಡಗಿದ ನಂತರ ಸಾಹಿತ್ಯ, ಸಂಗೀತ, ಕಲೆ ಇತ್ಯಾದಿಗಳು ಮರೆಗೆ ಹೋಗಿ ಜಾತೀಯತೆ ಮುನ್ನೆಲೆಗೆ ಬಂತು. ಸಾಹಿತ್ಯದಿಂದ ಇದನ್ನೆಲ್ಲ ವಿರೋಧಿಸಬಹುದು. ಅದಕ್ಕಾಗಿ ಮಾನವ ಧರ್ಮ ಅನುಷ್ಠಾನಕ್ಕೆ ಬರಬೇಕು ಎಂದು‌ ಹೇಳಿದ್ದ ಕುವೆಂಪು ಅವರ ಮಾತನ್ನು ಪಾಲಿಸಬೇಕು’ ಎಂದು ಅವರು ಹೇಳಿದರು.

‘ಕನ್ನಡ ಭಾಷೆ ಅಪಾಯದಲ್ಲಿದೆ. ಯುರೋಪ್‌ನಲ್ಲಿ ಲಿಂಕ್ ಭಾಷೆಯಾಗಿ ಇಂಗ್ಲಿಷ್ ಬಳಸುತ್ತಾರೆ. ನಮ್ಮಲ್ಲೂ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು, ಇಂಗ್ಲಿಷ್ ಲಿಂಕ್ ಭಾಷೆ ಆದರೆ ಸಾಕು. ಇದರ ಜೊತೆಯಲ್ಲಿ ಶಾಲೆಗಳ ಶಿಥಿಲಾವಸ್ಥೆಗೂ ಪರಿಹಾರ ಕಾಣಬೇಕಾಗಿದೆ. ಶಿಕ್ಷಕರ ಬೇಮಕಾತಿ ಆಗಬೇಕಾಗಿದೆ. ಇಲ್ಲವಾದರೆ ಕನ್ನಡ ಶಾಲೆಗಳನ್ನು ಮುಚ್ಚಬೇಕಾದೀತು. ಶಿಕ್ಷಣಕ್ಕೆ ಶೇಕಡ 2ರಷ್ಟು ಹಣವನ್ನು ಬಜೆಟ್‌ನಲ್ಲಿ ತೆಗೆದಿರಿಸಲು ಸರ್ಕಾರಗಳು ಮುಂದಾಗುತ್ತಿಲ್ಲ. ದೇವಾಲಯಗಳಲ್ಲಿ ಇರುವ ಚಿನ್ನವನ್ನು ಪುರೋಹಿತಶಾಹಿಗಳು  ಲಪಟಾಯಿಸದಂತೆ ನೋಡಿಕೊಳ್ಳಬೇಕು, ಅದನ್ನು ಬಳಸಿಕೊಂಡು ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಅವರು ಆಗ್ರಹಿಸಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ ವಿಧಾನಸೌಧದ ಆವರಣದಲ್ಲಿ ಇದೇ 27ರಂದು ನಡೆಯಲಿರುವ ಸಾಹಿತ್ಯ, ಸಾಂಸ್ಕೃತಿಕ ಉತ್ಸವ, ಪುಸ್ತಕ ಮೇಳದ ಆಶಯವನ್ನು ಗ್ರಾಮೀಣ ಪ್ರದೇಶಗಳಿಗೂ ಹಬ್ಬಿಸಲು ಅನುದಾನ ತೆಗೆದಿರಿಸುವ ಕುರಿತು ಚರ್ಚಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ರಾಜಕಾರಣಿಗಳಿಗೂ ಸಾಹಿತ್ಯದ ಪರಿಚಯ ಆಗಬೇಕು ಎಂಬ ಉದ್ದೇಶದಿಂದ ವಿಧಾನಸೌಧದ ಆವರಣದಲ್ಲಿ ಉತ್ಸವ ಆಯೋಜಿಸಲಾಗಿದೆ. ಇದೇ ರೀತಿ ಗ್ರಾಮೀಣ ಪ್ರದೇಶದಲ್ಲೂ ಸಾಹಿತ್ಯ ಪಸರಿಸಬೇಕು ಎಂಬ ಆಶಯ ಈಡೇರಲು ಅನುದಾನದ ಅಗತ್ಯವಿದೆ ಎಂದು ಅವರು ಹೇಳಿದರು.

‘ವಿವಿಯಲ್ಲಿ ಬೃಹತ್ ರಾಷ್ಟ್ರಧ್ವಜ ಸ್ತಂಭ’

ಉಳ್ಳಾಲ ಪೇಟೆಯಲ್ಲಿ ಇರುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಸ್ಥಾಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.

ಉಳ್ಳಾಲದಲ್ಲಿರುವ ರಾಷ್ಟ್ರಧ್ವಜ ಗಮನ ಸೆಳೆಯುತ್ತಿದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸುವ ಧ್ವಜಸ್ತಂಭ ಸಾಹಿತ್ಯ ಸಮ್ಮೇಳನದ ನೆನಪು ಬಿತ್ತರಿಸಲಿ ಎಂದು ಹೇಳಿದ ಅವರು ಈಗ ಮಕ್ಕಳ ಪೋಷಕರಿಗಾಗಿ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕಾದ ಅಗತ್ಯ ಉಂಟಾಗಿದೆ. ಮಕ್ಕಳನ್ನು ಮಾಲ್‌ಗಳಿಗೆ ಕರೆದುಕೊಂಡು ಹೋಗುವವರು ಪುಸ್ತಕ ಮಳಿಗೆಗಳತ್ತ ಹೋಗುವಂತೆ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.