ADVERTISEMENT

ಕನ್ನಡ ಶಾಲೆಯ ಶಕ್ತಿ ಅಗಾಧವಾದುದು: ಸಂಸದ ನಳಿನ್‌ ಕುಮಾರ್ ಕಟೀಲ್‌

ಕಟೀಲು: ಭ್ರಮರ--– ಇಂಚರ ನುಡಿಹಬ್ಬ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 7:31 IST
Last Updated 3 ಡಿಸೆಂಬರ್ 2022, 7:31 IST
ಕಟೀಲಿನ ಶ್ರೀವಿದ್ಯಾ ಸಭಾಭವನದಲ್ಲಿ ಮೂರು ದಿನ ನಡೆಯುವ ಭ್ರಮರ- –ಇಂಚರ ನುಡಿಹಬ್ಬವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಕಟೀಲಿನ ಶ್ರೀವಿದ್ಯಾ ಸಭಾಭವನದಲ್ಲಿ ಮೂರು ದಿನ ನಡೆಯುವ ಭ್ರಮರ- –ಇಂಚರ ನುಡಿಹಬ್ಬವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.   

ಮೂಲ್ಕಿ: ‘ಮಾತೃಭಾಷೆಯ ಶಿಕ್ಷಣ ದೊಂದಿಗೆ ರಾಷ್ಟ್ರಭಾಷೆಯನ್ನು ಮಕ್ಕಳಿಗೆ ಕಲಿಸಬೇಕು. ನಾವು ಮೊದಲು ಮಾತೃಸ್ಥಾನಕ್ಕೆ ಆದ್ಯತೆ ನೀಡಬೇಕು. ಕನ್ನಡ ಶಾಲೆಯ ಶಕ್ತಿ ಅಗಾಧ ವಾದುದು’ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಶ್ರೀವಿದ್ಯಾ ಸಭಾಭವನದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳಲ್ಲಿ ನಡೆಯುವ ಭ್ರಮರ- ಇಂಚರ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡವನ್ನು ಉಳಿಸಿ, ಕನ್ನಡ ಶಾಲೆಯನ್ನು ಬೆಳೆಸಿ ಎಂದು ಹೇಳುವ ಬದಲು ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಿದಲ್ಲಿ ತನ್ನಿಂತಾನೆ ಕನ್ನಡ ಶಾಲೆಗಳು ಉಳಿಯುತ್ತದೆ. ಕಟೀಲಿನ ನುಡಿ ಹಬ್ಬವೇ ಪ್ರೇರಣೆಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ಹಲವಾರು ಕೌಶಲದ ಪ್ರತಿಭೆಗಳನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಮಕ್ಕಳ ಹೃದಯದಲ್ಲಿ ಆದರ್ಶದ ಕಥಾನಕಗಳು ತಿಳಿ ಹೇಳಿದಲ್ಲಿ ಅವರಲ್ಲಿ ಸಂಸ್ಕೃತಿಯನ್ನು ಅರಳಿಸುವ ಕೆಲಸ ನಡೆಯುತ್ತದೆ’ ಎಂದು ಹೇಳಿದರು.

ADVERTISEMENT

ನುಡಿ ಹಬ್ಬವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, ‘ಮಕ್ಕಳ ಪ್ರತಿಭೆಯನ್ನು ಅರಳಿಸಲು ಶಿಕ್ಷಣ ಸಂಸ್ಥೆಯಿಂದ ಸಾಧ್ಯವಿದೆ. ಮಕ್ಕಳು ತಮಗೆ ಸಿಗುವ ಅವಕಾಶವನ್ನು ಬಳಸಿ ಕೊಂಡು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಪ್ರಯತ್ನ ನಡೆಸಬೇಕು’ ಎಂದರು.

ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ, ‘ಪ್ರಾದೇಶಿಕ ಭಾಷೆಯೇ ತಾಯಿ ನುಡಿಯಾಗಿದೆ. ಬಹುಭಾಷಾ ಪ್ರದೇಶವಾದ ತುಳುನಾಡಿನಲ್ಲಿ ಯಾವ ಭಾಷೆಯನ್ನು ಪ್ರೀತಿಸಬೇಕು ಎಂಬ ಗೊಂದಲ ಇದೆ. ಮೊದಲು ತಾಯಿ ಭಾಷೆಯನ್ನು ಉಳಿಸುವತ್ತ ಪ್ರಯತ್ನ ಸಾಮೂಹಿಕವಾಗಿ ನಡೆಯಬೇಕು. ನಮ್ಮ ಹಿರಿಯರು ತುಳುವಿನೊಂದಿಗೆ ಇತರ ಭಾಷೆಗಳನ್ನು ಆಧರಿಸಿದರು. ಆಂಗ್ಲ ವ್ಯಾಮೋಹದಿಂದ ನಡುವೆ ಸೇರಿಕೊಂಡು ಮೂಲ ಕನ್ನಡ ಶಬ್ದಗಳನ್ನು ಮರೆತು ಬಿಡುತ್ತಿದ್ದಾರೆ. ಯಕ್ಷಗಾನದಲ್ಲಿ ಇಂದಿಗೂ ಪರಿಶುದ್ಧ ಭಾಷೆಯ ಪದಗಳನ್ನು ಬಳಸಲಾಗುತ್ತಿದೆ. ಭಾಷೆಯನ್ನು ಚೆನ್ನಾಗಿ, ಸ್ಪಷ್ಟತೆಯಿಂದ ಬಳಸುವ ವಿಧಾನಕ್ಕೆ ಗಮನಕೊಟ್ಟಲ್ಲಿ ನಿಜವಾದ ನುಡಿಹಬ್ಬವಾಗಿದೆ ಎಂದರು.

ಕಟೀಲು ದೇವಳದ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ ಮಾತನಾಡಿದರು. ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ ಶ್ರೀನಾಥ್ ಅವರು ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಕಾಲೇಜಿನ ‘ಭ್ರಮರವಾಣಿ’ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು. ‘ಕೃಷಿಯ ಋಷಿ’ ಬದುಕು ಗೋಷ್ಠಿಯಲ್ಲಿ ಜನಪದ ಸಂಗ್ರಹಗಾರ ಡಾ.ನರೇಂದ್ರ ರೈ ದೇರ್ಲ, ಜೇನು ಕೃಷಿಯ ಬಗ್ಗೆ ಮನಮೋಹನ ಪುತ್ತೂರು, ವಿವಿಧ ಭತ್ತದ ತಳಿಯ ಬಗ್ಗೆ ಅಬೂಬಕರ್ ಕಾರ್ಕಳ, ವಿವಿಧ ಸಸ್ಯ ಪ್ರಭೇದದ ಬಗ್ಗೆ ಉದಯಕುಮಾರ ಶೆಟ್ಟಿ ಪಿಲಿಕುಳ, ಸಾವಯವ ಕೃಷಿಯ ಬಗ್ಗೆ ರತ್ನಾಕರ ಕುಳಾಯಿ ಮಾತನಾಡಿದರು.

ಸ್ಫೂರ್ತಿಯ ಬದುಕು ಗೋಷ್ಠಿ ಯಲ್ಲಿ ಅಂಧ ಗಣಿತ ಪ್ರತಿಭೆ ಬಸವರಾಜ್ ಉಮ್ರಾಣಿ, ಬಣ್ಣದ ಬದುಕು ಗೋಷ್ಠಿಯಲ್ಲಿ ಚಿತ್ರನಟಿ ತಾರಾ ಅನುರಾಧಾ, ಶ್ರೀಪತಿ ಮಂಜನಬೈಲು ಭಾಗವಹಿಸಿದ್ದರು. ಪ್ರತಿ ಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿಗಳು ಅತಿಥಿಗಳಾಗಿದ್ದರು.

ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸುದರ್ಶನ್ ಜೈನ್ ಬಂಟ್ವಾಳ, ಶ್ರೀಧರ ಡಿ.ಎಸ್, ಲೋಕಯ್ಯ ಸಾಲ್ಯಾನ್ ಕಟೀಲು, ಸಿ.ಕೆ. ಮೋಹನ್ ರಾವ್, ಪ್ರಾಂಶುಪಾಲ ಕುಸುಮಾವತಿ , ಉಪ ಪ್ರಾಂಶುಪಾಲ ಸೋಮಪ್ಪ ಅಲಂಗಾರ್, ಶಿಕ್ಷಕ ಚಂದ್ರಶೇಖರ್ ಭಟ್, ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ಉಪನ್ಯಾಸಕ ಸಂತೋಷ್ ಇದ್ದರು.

ಕಲಾವಂತಿಕೆ ಮುಖ್ಯ: ತಾರಾ

ವಿದ್ಯಾರ್ಥಿ ಜೀವನವು ಮನುಷ್ಯನ ಅತ್ಯಮೂಲ್ಯ ಸುವರ್ಣಯುಗವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಕಲಾವಿದರಾಗಬೇಕಾದರೆ ಸಾಧನೆ, ತಾಳ್ಮೆ, ಪರಿಶ್ರಮ ಮುಖ್ಯವಾಗಿ ಬೇಕಾಗಿದೆ. ನಿರಂತರವಾಗಿ ಪರಿಪಕ್ವವಾಗಿ ಅರಗಿಸಿಕೊಳ್ಳುವ ಕಲಾವಂತಿಗೆ ಇದ್ದಲ್ಲಿ ಮಾತ್ರ ಕಲಾವಿದನಾಗಿ ಬೆಳೆಯಲು ಸಾಧ್ಯವಿದೆ. ನುಡಿಯನ್ನು ಹಬ್ಬವನ್ನಾಗಿಸಿರುವ ಸಂಘಟಕರನ್ನು ಅಭಿನಂದಿಸಲೇಬೇಕು’ ಎಂದು ಚಿತ್ರನಟಿ ತಾರಾ ಅನುರಾಧ ಹೇಳಿದರು.

ವಸ್ತು ಸಂಗ್ರಹಾಲಯ

ನುಡಿ ಹಬ್ಬದ ಪ್ರಾಂಗಣದಲ್ಲಿ ಜಾನಪದ, ಯಕ್ಷಗಾನ, ತುಳುನಾಡಿನ ಪರಂಪರೆ, ಸಾಹಿತ್ಯ, ಕೌಶಲದ ವಸ್ತುಸಂಗ್ರಹಾಲಯವು ವಿದ್ಯಾರ್ಥಿಗಳಿಂದಲೇ ನಿರ್ಮಿಸಲಾಗಿದೆ. ಯಕ್ಷಗಾನದ ಪ್ರದರ್ಶನದಲ್ಲಿ ಹಿಂದೆ ಅಳವಡಿಸುತ್ತಿದ್ದ ರಂಗ ವೇದಿಕೆಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳೇ ತಯಾರಿಸಿದ ಹೂಗುಚ್ಚಗಳನ್ನು ಅತಿಥಿಗಳು ಶ್ಲಾಘಿಸಿದರು.

ಆಕರ್ಷಕ ಮೆರವಣಿಗೆ

ಕಟೀಲು ಪದವಿ ಕಾಲೇಜಿನಿಂದ ಪದವಿಪೂರ್ವ ಕಾಲೇಜಿವರೆಗೆ ನಡೆದ ಆಕರ್ಷಕ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ಪೋಷಕ ಅಗರಿ ರಾಘವೇಂದ್ರ ರಾವ್ ಚಾಲನೆ ನೀಡಿದರು. ಮೆರವಣಿಗೆ ಕಣ್ಮನ ಸೆಳೆಯಿತು. ಭಗವದ್ಗೀತೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ವಿವಿಧ ವೇಷ ಭೂಷಣಗಳು, ವಾದ್ಯ ಗೋಷ್ಠಿ ಸಹಿತ ಕುಣಿತ ಭಜನಾ ತಂಡವು ಮೆರವಣಿಗೆಗೆ ಶೋಭೆ ನೀಡಿತು. ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವು ಗಮನ ಸೆಳೆಯಿತು.

ನುಡಿಹಬ್ಬದಲ್ಲಿ ಇಂದು

ಶನಿವಾರ ತುಳು ಉಚ್ಛಯ ಕಾರ್ಯಕ್ರಮದಲ್ಲಿ ಡಾ.ದೇವದಾಸ ಕಾಪಿಕಾಡ್, ಡಾ.ಗಣೇಶ ಅಮೀನ್ ಸಂಕಮಾರ್ ಭಾಗವಹಿಸಲಿದ್ದಾರೆ. ಬಳಿಕ ತುಳುನಾಡು ಇತಿಹಾಸದ ಬಗ್ಗೆ ತುಕಾರಾಮ ಪೂಜಾರಿ, ತುಳುನಾಡಿನ ದೇವಾಲಯ ಸಂಸ್ಕೃತಿ ಬಗ್ಗೆ ಡಾ.ಪುಂಡಿಕಾಯಿ ಗಣಪಯ್ಯ ಭಟ್, ತುಳು ಗೊಬ್ಬುಲು ಬಗ್ಗೆ ಡಾ.ಗಣನಾಥ ಎಕ್ಕಾರು ಮಾತನಾಡುವರು. ಕಿರುತೆರೆ ಸಾಹಿತ್ಯ ಬದುಕಿನ ಬಗ್ಗೆ ನಿರ್ದೇಶಕ ಟಿ.ಎನ್. ಸೀತಾರಾಂ, ಧಾರಾವಾಹಿ ಕಥೆಗಾರ ಶ್ರೀನಿಧಿ ಡಿ.ಎಸ್, ಯಕ್ಷಗಾನ ಸಾಹಿತ್ಯ ಯಕ್ಷಗಾನದಿಂದ ಬದುಕು ಗೋಷ್ಠಿಯಲ್ಲಿ ಸುಣ್ಣಂಬಳ ವಿಶ್ವೇಶ್ವರ ರಾವ್, ಡಾ.ಪೃಥ್ವಿರಾಜ್ ಕವತ್ತಾರು, ವಾಸುದೇವ ರಂಗಾ ಭಟ್, ವಾದಿರಾಜ ಕಲ್ಲೂರಾಯ ಮಾತನಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.