ವಿಟ್ಲ: ಕನ್ಯಾನ-ಕರೋಪಾಡಿ ಗ್ರಾಮಗಳ ಗಡಿ ಭಾಗದ ಮಂಡ್ಯೂರು ಎಂಬಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಾಹಿತಿ ಹಬ್ಬಿದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಳೇ ಕಟ್ಟಡದ ಗೋಡೆ ಕುಸಿದಿದ್ದರಿಂದ ಕೆಲವರಿಗೆ ಈ ರೀತಿಯ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯೂರು ಎಂಬಲ್ಲಿ ಮಧ್ಯಾಹ್ನ ವೇಳೆಗೆ ಭೂಮಿ ಕಂಪಿಸಿದೆ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿಯಬಿಟ್ಟಿದ್ದರು. ಈ ಮಾಹಿತಿ ತಿಳಿದು ಸ್ಥಳೀಯ ಗ್ರಾಮ ಪಂಚಾಯಿತಿಯ ಗ್ರಾಮ ಆಡಳಿತಾಧಿಕಾರಿ ಅನಿಲ್ ಕುಮಾರ್, ಕನ್ಯಾನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಬ್ದುಲ್ ಕರೀಂ, ಕಂದಾಯ ನಿರೀಕ್ಷಕ ರವಿ ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಭೂ ವಿಜ್ಞಾನ ಇಲಾಖೆಯ ಅಧಿಕಾರಿ ದಾವೂದ್, ವಿಟ್ಲ ಠಾಣಾಧಿಕಾರಿ ರತನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಕನ್ಯಾನಕ್ಕೆ ಧಾವಿಸಿದ್ದರು.
ಕೆಲವು ತಿಂಗಳ ಹಿಂದೆ ವಿಟ್ಲದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಪರಿಶೀಲಿಸಿದಾಗ ಮಾಡತ್ತಡ್ಕ ಎಂಬಲ್ಲಿ ಕಲ್ಲಿನ ಕ್ವಾರಿಯಲ್ಲಿ ದಾಸ್ತಾನಿಟ್ಟಿದ್ದ ಸ್ಫೋಟಕ ಸ್ಫೋಟಿಸಿದ್ದು ಗೊತ್ತಾಗಿತ್ತು. ಇದು ಕೂಡಾ ಅದೇ ರೀತಿ ಘಟನೆ ಆಗಿರಬಹುದು ಎಂದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದರು. ಕರೋಪಾಡಿ ಗ್ರಾಮದಲ್ಲಿ ಬಾಕ್ಸೈಟ್ ಅಂಶವಿರುವ ಮಣ್ಣು ಅಗೆಯಲಾಗುತ್ತಿದೆ. ಇದರಿಂದ ಭೂಮಿ ಕಂಪಿಸಿರಬಹುದು ಎಂಬ ವದಂತಿಯೂ ಹಬ್ಬಿತ್ತು. ಈ ಎಲ್ಲಾ ವದಂತಿಗಳಿಗೆ ಕಂದಾಯ ಅಧಿಕಾರಿಗಳು ಅಂತ್ಯ ಹಾಡಿದರು.
‘ಕಂಪನದ ಅನುಭವ ಆದ ಸಮಯದಲ್ಲೇ ಕರೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಯೊಂದರ ಹಳೇ ಕಟ್ಟಡದ ಗೋಡೆ ಕುಸಿದಿತ್ತು. ಅದರ ಶಬ್ದದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.