ಪುತ್ತೂರು: ‘ಡಾ.ಶಿವರಾಮ ಕಾರಂತರ ಬಾಲವನ ನಿರಂತರ ಚಟುವಟಿಕೆಯ ಕೇಂದ್ರವಾಗಬೇಕು. ಬಾಲವನಕ್ಕೆ ಮೇಲ್ವಿಚಾರಕರನ್ನು ನೇಮಿಸಿ ಪ್ರತಿ ವಾರಾಂತ್ಯದಲ್ಲಿ ಮಕ್ಕಳ ನಾಟಕ, ಹಾಡು, ಕುಣಿತ, ಪೇಂಟಿಂಗ್, ವೈಚಾರಿಕ ವಿಚಾರಸಂಕಿರಣ ನಡೆಸಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.
ಪುತ್ತೂರಿನ ಪರ್ಲಡ್ಕದ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಶಿವರಾಮ ಕಾರಂತ ಬಾಲವನ ಮತ್ತು ಉಪವಿಭಾಗಾಧಿಕಾರಿ ಕಚೇರಿ ಆಶ್ರಯದಲ್ಲಿ ಶುಕ್ರವಾರ ನಡೆದ ಡಾ.ಶಿವರಾಮ ಕಾರಂತರ 124ನೇ ಜನ್ಮದಿನೋತ್ಸವದಲ್ಲಿ ಅವರು ಬಾಲವನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವರ್ಷಕ್ಕೆ ಒಂದೂ ಬಾರಿಯಾದರೂ ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡು 2 ದಿನಗಳ ಕಾರಂತ ಉತ್ಸವ ನಡೆಸಬೇಕು. ಕಾರಂತರ ಆಶಯಗಳಿಗೆ ಮರುಜೀವ ಕೊಡಬೇಕು. ಹಾಗಾದರೆ ಮಾತ್ರ ಬಾಲವನ ಪುತ್ತೂರಿಗೊಂದು ಆಕರ್ಷಣೆಯಾಗುತ್ತದೆ ಎಂದರು.
ಕಾದಂಬರಿಕಾರ ಯಾವುದೇ ಊಹಾಲೋಕದಲ್ಲಿ ಬದುಕುವುದಿಲ್ಲ ಎಂಬುದನ್ನು ಕಾರಂತರ ಕಾದಂಬರಿಗಳಿಂದ ತಿಳಿಯಬಹುದು. ಆ ಕಾಲದಲ್ಲಿ ಕಾರಂತರರು ಮಾಡಿರುವ ಸಾಮಾಜಿಕ ಕ್ರಾಂತಿ ಬಹುದೊಡ್ಡದು. ಅನುಭವ, ಅಧ್ಯಯನ, ಪ್ರವಾಸ, ಚಿಂತನೆ ಎಲ್ಲವನ್ನೂ ಒಳಗೊಂಡ ಸಾಹಿತ್ಯ ಅವರದ್ದಾಗಿದೆ ಎಂದರು.
ಕಾರಂತ ಸ್ಮರಣೆ ಮಾಡಿದ ಶಿವರಾಮ ಕಾರಂತರ ಸೋದರಳಿಯ, ಸಾಹಿತಿ ಶಾಂತಾರಾಮ ರಾವ್ ಮಾತನಾಡಿ, ಕಾರಂತರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಸಮಯ ಪಾಲನೆ ಮಾಡುತ್ತಿದ್ದ ಅವರಲ್ಲಿ ಬಡವ-ಬಲ್ಲಿದರೆಂಬ ಭೇದ ಮಾಡದ, ಯಾವುದಕ್ಕೂ ಬಗ್ಗದ ವ್ಯಕ್ತಿತ್ವ ಇತ್ತು. ಕಾರಂತರಿಗೆ ಕಾರಂತರೇ ಸಾಕ್ಷಿಯಾಗಿದ್ದು, ಅವರ ಚಳವಳಿಯನ್ನು ಶುಷ್ಕವಾಗಿಸಲು ಬಿಡದೆ ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್‌ಕುಮಾರ್ ರೈ ಮಾತನಾಡಿ, ಬಾಲವನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಮಿತಿ ರಚಿಸಿ ತೀರ್ಮಾಣ ಕೈಗೊಳ್ಳಲಾಗುವುದು. ಕೊಟ್ಟಿಗೆಹಾರದಲ್ಲಿರುವ ಪೂರ್ಣಚಂದ್ರ ತೇಜಸ್ವಿಯವರ, ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆಯ ಮಾದರಿಯಲ್ಲಿ ಪ್ರಕೃತಿಗೆ ತೊಂದರೆಯಾಗದ ರೀತಿಯಲ್ಲಿ ಬಾಲವನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಶಿವರಾಮ ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ತಾಲ್ಲೂಕು ಆರೋಗ್ಯಾಧಿಕಾರಿ ದೀಪಕ್ ರೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಭಾಗವಹಿಸಿದ್ದರು.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ.ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಜಗನ್ನಾಥ್ ಅರಿಯಡ್ಕ ವಂದಿಸಿದರು, ಶಿಕ್ಷಕ ರಮೇಶ್ ಉಳಯ ನಿರೂಪಿಸಿದರು.
ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯು ಕಾರಂತರ ಪುತ್ಥಳಿಯ ಫಲಕ, ಸ್ಮರಣಿಕೆ, ₹ 25 ಸಾವಿರ ನಗದು ಒಳಗೊಂಡಿದ್ದು, 2024ರ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಬಿ.ಎ.ವಿವೇಕ ರೈ, 2025ರ ಸಾಲಿನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶಿಕ್ಷಣ ತಜ್ಞ ಎನ್.ಸುಕುಮಾರ ಗೌಡ ಅವರಿಗೆ ಪ್ರದಾನ ಮಾಡಲಾಯಿತು.
ವಿವೇಕ ರೈ ಕುರಿತು ಮುಂಬೈ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ತಾಳ್ತಜೆ ವಸಂತ ಕುಮಾರ, ಸುಕುಮಾರ ಗೌಡ ಅವರ ಬಗ್ಗೆ ಪುತ್ತೂರಿನ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕ್ಸೇವಿಯರ್ ಡಿಸೋಜ ಅವರು ಅಭಿನಂದನಾ ನುಡಿಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.