ADVERTISEMENT

ಕೇರಳ ಸಿಎಂ ಹೇಳಿಕೆಗೆ ವಿರೋಧ: ಉದ್ಯೋಗಕ್ಕೆ ಮಲಯಾಳಂ ಭಾಷೆ ಕಡ್ಡಾಯ ಬೇಡ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 7:57 IST
Last Updated 24 ಫೆಬ್ರುವರಿ 2022, 7:57 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ಮಂಗಳೂರು: ಕೇರಳದಲ್ಲಿ ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ ಎಂಬ ಮುಖ್ಯಮಂತ್ರಿಪಿಣರಾಯಿ ವಿಜಯನ್ ಹೇಳಿಕೆಗೆ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ರಾಜಧಾನಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಲೆಯಾಳ ಮಿಷನ್ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ' ಎಂಬ ಹೇಳಿಕೆ ಕೊಟ್ಟಿರುವುದು ಕಾಸರಗೋಡು ಹಾಗೂ ಸುತ್ತ ಇರುವ ಅಲ್ಪಸಂಖ್ಯಾತ ಕನ್ನಡಿಗರಲ್ಲಿ ಆತಂಕ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಪ್ರದೇಶದಲ್ಲಿ ಮಲಯಾಳಂ ಭಾಷೆಯಿಂದ ವಿನಾಯತಿ ಇದ್ದು ಅದು ಮುಂದುವರಿಯಬೇಕಾಗಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಿಗರಿಗೂ ಮಲಯಾಳಂ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪ ಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದ್ದಾರೆ.

ದಯವಿಟ್ಟು ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವಂತೆ ಯಾವುದೇ ರೀತಿಯಲ್ಲಿಯೂ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸದಿರಲು ಕೇರಳ ಮುಖ್ಯಮಂತ್ರಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಮೂಲಕ ಪ್ರಾಧಿಕಾರ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ಒಂದು ವೇಳೆ ಕನ್ನಡಿಗರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆಯಾದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.