ADVERTISEMENT

3 ವರ್ಷದೊಳಗೆ ಮೆಡಿಕಲ್ ಕಾಲೇಜು ಲೋಕಾರ್ಪಣೆಯ ಗುರಿ: ಶಾಸಕ ಅಶೋಕ್‌ಕುಮಾರ್ ರೈ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 14:18 IST
Last Updated 8 ಮಾರ್ಚ್ 2025, 14:18 IST

ಪುತ್ತೂರು: ಈ ಬಾರಿಯ ಬಜೆಟ್‌ನಲ್ಲಿ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಲಾಗಿದೆ. ಈ ಸಂಬಂಧ ತಾಲ್ಲೂಕು ಆಸ್ಪತ್ರೆಯನ್ನು 2 ವರ್ಷದೊಳಗೆ 350ರಿಂದ 400 ಬೆಡ್‌ಗಳ ಆಸ್ಪತ್ರೆಯನ್ನಾಗಿಸಿ, 3 ವರ್ಷದ ಅವಧಿಯಲ್ಲಿ ಮೆಡಿಕಲ್ ಕಾಲೇಜನ್ನು ಲೋಕಾರ್ಪಣೆ ಮಾಡಬೇಕೆಂಬ ಗುರಿ ಇದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದಾಗ ಪುತ್ತೂರಿನ ಸೇಡಿಯಾಪು ಎಂಬಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು 40 ಎಕರೆ ಕಾಯ್ದಿರಿಸಲಾಗಿತ್ತು. ಸ್ಥಳೀಯ ಅಧಿಕಾರಿಗಳಿಂದ ಹಿಡಿದು ಉನ್ನತ ಅಧಿಕಾರಿಗಳ ಮಟ್ಟದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮುಖ್ಯಮಂತ್ರಿವರೆಗೆ ಮೆಡಿಕಲ್ ಕಾಲೇಜು ವಿಚಾರವನ್ನು ಕೊಂಡೊಯ್ದು ಒತ್ತಡ ಹೇರಿ, ಪೂರ್ವ ಬಜೆಟ್ ಸಭೆಗಳಲ್ಲಿ ಭಾಗವಹಿಸಿ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿ, ಪ್ರಯತ್ನಿಸಿದ್ದರಿಂದ ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದರು.

ಮೆಡಿಕಲ್ ಕಾಲೇಜು ಆರಂಭಿಸಬೇಕಾದರೆ 350ರಿಂದ 400 ಬೆಡ್‌ಗಳ ಆಸ್ಪತ್ರೆಯನ್ನು ಸಿದ್ಧಗೊಳಿಸಿ ಮೆಡಿಕಲ್ ಕೌನ್ಸಿಲ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ. ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಸುಮಾರು ₹ 400 ಕೋಟಿ ಅನುದಾನ ಬೇಕಾಗಿದೆ. ಹಂತ ಹಂತವಾಗಿ ಈ ಕೆಲಸ ಮಾಡಲಾಗುವುದು. ಈಗ ಇರುವ ತಾಲ್ಲೂಕು ಆಸ್ಪತ್ರೆಯನ್ನು ಮಹಿಳೆಯರ ಹೆರಿಗೆ ಆಸ್ಪತ್ರೆಯನ್ನಾಗಿ ಉಳಿಸಿಕೊಂಡು ಮೆಡಿಕಲ್ ಕಾಲೇಜಿಗಾಗಿ ಕಾಯ್ದಿರಿಸಿರುವ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಕ್ಯಾಬಿನೆಟ್ ಮಂಜೂರಾತಿ ಪಡೆದುಕೊಂಡು ಆಸ್ಪತ್ರೆಗೆ ಕಟ್ಟಡಕ್ಕೆ 6 ತಿಂಗಳೊಳಗೆ ಶಿಲಾನ್ಯಾಸ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಈ ಹಿಂದೆ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪುತ್ತೂರಿನ ಹೆಸರು ಇರುತ್ತಿರಲಿಲ್ಲ. ಅನುದಾನ ತರಿಸಿಕೊಳ್ಳಲೂ ಹಿಂದೆ ಬಿದ್ದಿದ್ದೆವು. ಆದರೆ, ಈ ಬಾರಿ ಮೆಡಿಕಲ್ ಕಾಲೇಜು ಮಂಜೂರಾತಿಯ ಜತೆಗೆ ಕೊಯಿಲ ಪಶು ಸಂಗೋಪನಾ ಕೇಂದ್ರದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ₹ 24 ಕೋಟಿ ಮುಂಜೂರಾಗಿದೆ. ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಸಂಬಂಧಿಸಿ ₹ 62 ಕೋಟಿ ನಿಗದಿಮಾಡಲಾಗಿದೆ. ಕೆಪಿಎಸ್ ಶಾಲೆಗಳಿಗಾಗಿ ಬಜೆಟ್‌ನಲ್ಲಿ ₹2,500 ಕೋಟಿ ಅನುದಾನ ನಿಗದಿಮಾಡಿರುವುದರಿಂದ ನಮ್ಮ ಬೇಡಿಕೆಗಳೂ ಈಡೇರಲಿದೆ ಎಂದು ಅವರು ತಿಳಿಸಿದರು.

ಮಾಜಿ ಶಾಸಕರ ಹೇಳಿಕೆಗೆ ತಿರುಗೇಟು: 5 ವರ್ಷದಲ್ಲಿ ಕಡತ ತಲುಪಿಸಲಾಗದ ಪುತ್ತೂರಿಗೆ ಮೆಡಿಕಲ್ ಕಾಲೇಜು ಭರವಸೆ ಮಾತ್ರ. ಇದು ಶಾಸಕರ ಒತ್ತಡಕ್ಕಾಗಿ ಅವರನ್ನು ತೃಪ್ತಿ ಪಡಿಸುವ ಕೆಲಸ ಮಾಡಲಾಗಿದೆ ಎಂಬ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಶೋಕ್‌ಕುಮಾರ್‌ ರೈ, ಬೇರೆ ಬೇರೆ ಮನಃಸ್ಥಿತಿಯವರು ಸಮಾಜದಲ್ಲಿದ್ದಾರೆ. ಅವರ 5 ವರ್ಷದ ಅವಧಿಯಲ್ಲಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರಿಗೆ ಕಳುಹಿಸಲು ಸಾಧ್ಯವಾಗದವರು ಮತ್ತೇನು ಮಾಡಿಯಾರು ಎಂದರು.

ಅಭಿವೃದ್ಧಿಯ ವಿಚಾರದಲ್ಲಿ ಸಂಸದರು ನನ್ನ ಪ್ರಯತ್ನಕ್ಕೆ ಸಹಕಾರ ನೀಡಿದ್ದಾರೆ. ಖೇಲ್ ಇಂಡಿಯಾ, ಪ್ರಸಾದಂ ಯೋಜನೆಗೆ ಸಂಬಂಧಿಸಿ ಅವರು ಸಹಕಾರ ನೀಡಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಇಲ್ಲ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.